ಚಡಚಣದ ಎಪಿಎಂಸಿಯ ಶೌಚಗೃಹ ನಿರ್ಮಾಣದ ಸ್ಥಳಕ್ಕೆ ಸಾರ್ವಜನಿಕರು ಭೇಟಿ ನೀಡಿದರು. ಅರವಿಂದ ಗಡ್ಡದೇವರಮಠ ಸ್ಥಳೀಯರು, ಎಪಿಎಂಸಿ ಸಿಬ್ಬಂದಿ ಮತ್ತಿತರರಿದ್ದರು.
- ಎಪಿಎಂಸಿ ಕಾರ್ಯದರ್ಶಿ ಐ.ಎಸ್. ಔರಂಗಾಬಾದ ಹೇಳಿಕೆ
- ಸಾರ್ವಜನಿಕರು ಭೇಟಿ
ಸ್ಥಳೀಯ ಎ.ಪಿ.ಎಂ.ಸಿ. ಉಪಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಮಾರು 3ಕೋಟಿ ರೂ.ಗಳ ವಿವಿಧ ಕಾಮಗಾರಿಗಳಾದ ಕ್ಯಾಂಟೀನ್, ನಾಲ್ಕು ವ್ಯಾಪಾರ ಮಳಿಗೆ, ಹೈಟೆಕ್ ಕಚೇರಿ ಹಾಗೂ ಶೌಚಗೃಹಗಳ ಕಟ್ಟಡ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದ್ದು ಶೀಘ್ರದಲ್ಲಿಯೆ ನಿಗದಿತ ಸ್ಥಳದಲ್ಲಿ ಕಾಮಗಾರಿ ನಡೆಯಲಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಐ.ಎಸ್. ಔರಂಗಾಬಾದ ಹೇಳಿದರು.
ಶೌಚಗೃಹ ನಿರ್ಮಾಣಕ್ಕೆ ಆಕ್ಷೇಪಣೆ ಕೋರಿ ನಿವಾಸಿಗಳು ಎ.ಪಿ.ಎಂ.ಸಿ. ಕಾರ್ಯದರ್ಶಿ ಐ. ಎಸ್. ಔರಂಗಬಾದ ಅವರಿಗೆ ಮತ್ತು ಪ.ಪಂ. ಮುಖ್ಯಾಧಿಕಾರಿಗಳಿಗೆ ಜು.27ರಂದು ಮನವಿ ಸಲ್ಲಿಸಿದ್ದರು, ಕಾಮಗಾರಿ ಆರಂಭಿಸುವ ಮುನ್ನ ಸ್ಥಳವನ್ನು ಮರು ಪರಿಶೀಲಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ಸ್ಥಳದಲ್ಲಿ ಶೌಚಗೃಹ ನಿರ್ಮಿಸಬೇಕು ಎಂದು ಕೋರಿದ್ದ ಹಿನ್ನೆಲೆ ಸ್ಥಳೀಯ ಎ.ಪಿ.ಎಂ.ಸಿ.ಗೆ ಆಗಮಿಸಿ ಶೌಚಾಲಯ ನಿರ್ಮಾಣದ ಸ್ಥಳಕ್ಕೆ ಭೇಟಿ ಅವರು ಮಾತನಾಡಿದರು.
ಪಟ್ಟಣದ ಎ.ಪಿ.ಎಂ.ಸಿ. ಉಪಮಾರುಕಟ್ಟೆಯ ಒಟ್ಟು ಜಾಗ 7ಎಕರೆ 10 ಗುಂಟೆ ಇದ್ದು, ಸದ್ಯ ಕೇವಲ 6 ಎಕರೆ 20 ಗುಂಟೆ ಜಾಗ ಮಾತ್ರ ಲಭ್ಯವಿದೆ. ಇನ್ನುಳಿದ ಸ್ಥಳ ಸಿಗುತ್ತಿಲ್ಲ ಎಂದ ಅವರು, ಶೌಚಗೃಹ ನಿರ್ಮಾಣಕ್ಕೆ ಇಂಜಿನಿಯರ್ ತಾಂತ್ರಿಕವಾಗಿ ಸೂಕ್ತ ಸ್ಥಳವನ್ನು ಈಗಾಗಲೇ ಗುರುತಿಸಿದ್ದಾರೆ. ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಗುತ್ತಿಗೆದಾರರಿಗೂ ಕಾಮಗಾರಿ ವಹಿಸಲಾಗಿದೆ. ಇದು ಎಪಿಎಂಸಿಯ ಸ್ವಂತ ಜಾಗವಾಗಿದ್ದು, ಯಾವ ಸ್ಥಳದಲ್ಲಿ ನಿರ್ಮಾಣ ಮಾಡಬೇಕು ಎಂಬುವುದನ್ನು ನಿರ್ಧರಿಸುವ ಅಧಿಕಾರ ಎ.ಪಿ.ಎಂ.ಸಿ.ಗೆ. ಮಾತ್ರ ಇದೆ ಎಂದು ಸ್ಪಷ್ಟಪಡಿಸಿದ ಅವರು, ಅಲ್ಲದೆ ಈ ಕಾಮಗಾರಿಗೆ ಪ.ಪಂ. ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ಇತರ ಯಾವುದೇ ಇಲಾಖೆಯ ಅನುಮತಿ ಪಡೆಯುವ ಅಗತ್ಯವಿಲ್ಲ. ಹೀಗಾಗಿ ಶೌಚಗೃಹವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಸಾರ್ವಜನಿಕರ ಆಕ್ಷೇಪಣೆಯನ್ನು ಖಡಾಖಂಡಿತವಾಗಿ ತಳ್ಳಿಹಾಕಿದರು.
ನಿವಾಸಿ ನಿಲೇಶಸಿಂಗ್ ಹಜೇರಿ ಮಾತನಾಡಿ, ಪ್ರಸ್ತುತ ಆಯ್ಕೆ ಮಾಡಿರುವ ಸ್ಥಳದ ಪಕ್ಕದಲ್ಲೇ ಹಲವು ಕುಟುಂಬಗಳು ಸುಮಾರು ವರ್ಷಗಳಿಂದ ವಾಸಿಸುತ್ತಿವೆ. ಈಗಾಗಲೇ ಈ ಭಾಗದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ ಶೌಚಗೃಹದ ಮಲಿನ ನೀರನ್ನು ಚರಂಡಿಗೆ ಸಂಪರ್ಕಿಸಿದರೂ ಅಥವಾ ಇಂಗುಬಚ್ಚಲು ನಿರ್ಮಿಸಿದರೂ ಕಾಲಕ್ರಮೇಣ ದುರ್ವಾಸನೆ, ನೈರ್ಮಲ್ಯ ಸಮಸ್ಯೆ ಹಾಗೂ ಸೊಳ್ಳೆಗಳ ಕಾಟ ಹೆಚ್ಚುವ ಸಾಧ್ಯತೆ ಇದೆ. ಅದರಿಂದ ಸುತ್ತಮುತ್ತಲಿನ ನಿವಾಸಿಗಳು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅರವಿಂದ ಗಡ್ಡದೇವರಮಠ, ಸ್ಥಳೀಯರು, ಎ.ಪಿ.ಎಂ.ಸಿ. ಸಿಬ್ಬಂದಿ ಮತ್ತಿತರರು ಇದ್ದರು.