ಆರೋಗ್ಯ ಸಚಿವರಿಗೆ ಮನವಿ ಪತ್ರ
ಬೆಂಗಳೂರು: ಆಹಾರ ಸುರಕ್ಷತಾ ತಪಾಸಣಾ ಅಭಿಯಾನ ಕೈಗೊಂಡಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಹೋಟೆಲ್‌ಗಳಿಂದ ಹಿಡಿದು ಕ್ಲೌಡ್ ಕಿಚನ್‌ಗಳವರೆಗೆ ನಿಯಮಿತ ತಪಾಸಣೆ ನಡೆಸಬೇಕು.
ಆಹಾರ ಸುರಕ್ಷತಾ ತಪಾಸಣೆ ಕೆಲ ದಿನಗಳ ಅಭಿಯಾನಕ್ಕೆ ಸೀಮಿತವಾಗಬಾರದು. ಆಹಾರ ತಯಾರಿಕೆಯಿಂದ ಗ್ರಾಹಕರ ಕೈಸೇರುವವರೆಗಿನ ಸಂಪೂರ್ಣ ಸರಪಳಿಯ ಮೇಲೆ ನಿರಂತರವಾಗಿ ನಿಗಾ ಇಡಬೇಕೆಂಬ ಒತ್ತಾಯವೂ ಸಾರ್ವಜನಿಕರ ವಲಯದಲ್ಲಿ ಕೇಳಿಬಂದಿದೆ.
ಬೆಂಗಳೂರಿನಾದ್ಯಂತ ಆಹಾರ ಸಂಗ್ರಹಣೆ,ವಿತರಣಾ ಕೇಂದ್ರಗಳ ಪರಿಶೀಲನೆಗೆ 30 ತಂಡಗಳನ್ನು ರಚಿಸಿರುವುದು ಸ್ವಾಗತಾರ್ಹ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಲೌಡ್ ಕಿಚನ್‌ಗಳು ಮತ್ತು ಆನ್‌ಲೈನ್ ಆಹಾರ ವಿತರಣಾ ಸಂಸ್ಥೆಗಳು ಸೇರಿ ಸಂಪೂರ್ಣ ಆಹಾರ ಪೂರೈಕೆ ಸರಪಳಿಯನ್ನು ತಪಾಸಣೆಗೆ ಒಳಪಡಿಸಬೇಕು.
ಎಫ್ಎಸ್ಎಫ್ಎಐ ನೋಂದಣಿ ಅಥವಾ ಪರವಾನಗಿ, ನೈರ್ಮಲ್ಯ, ಕಚ್ಚಾ ವಸ್ತುಗಳ ಗುಣಮಟ್ಟ, ಸಂಗ್ರಹಣೆ ಹಾಗೂ ಆಹಾರದ ಮೂಲದ ಪತ್ತೆಹಚ್ಚುವಿಕೆ ಸೇರಿ ಅಗತ್ಯ ಮಾನದಂಡಗಳನ್ನು ಪರಿಶೀಲಿಸಬೇಕು. ಆಹಾರ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಕಾನೂನುಬದ್ಧವಾಗಿ ಫಲಿತಾಂಶ ಪ್ರಕಟಿಸುವ ವ್ಯವಸ್ಥೆ ರೂಪಿಸಬೇಕು. ಉಲ್ಲಂಘನೆ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗಂಭೀರ ಉಲ್ಲಂಘನೆಗಳು ದೃಢಪಟ್ಟಲ್ಲಿ ದಂಡಕ್ಕೆ ಸೀಮಿತವಾಗದೆ ಕಾನೂನನಡಿ ಪರವಾನಗಿ ಅಮಾನತು ಅಥವಾ ರದ್ದು ಸೇರಿ ಕಠಿಣ ಕ್ರಮ ಕೈಗೊಳ್ಳಬೇಕು.ಕ್ಲೌಡ್ ಕಿಚನ್‌ಗಳು,ಆನ್‌ಲೈನ್ ಆಹಾರ ವಿತರಣಾ ವ್ಯವಸ್ಥೆಗಳನ್ನೂ ಸಮಾನವಾಗಿ ತಪಾಸಣೆಗೆ ಒಳಪಡಿಸಬೇಕು. ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಯಾವುದೇ ಉಲ್ಲಂಘನೆಯನ್ನು ನಿರ್ಲಕ್ಷಿಸಬಾರದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರನ್ನು ವಿವಿಧ ಸಂಘಟನೆಗಳು ಆಗ್ರಹಿಸಿವೆ. ಈ ಕುರಿತು ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಬಿ.ಗಣರಂಜನ್ ಶೆಟ್ಟಿ, ಐಕೇರ್ ಬ್ರಿಗೇಡ್ ಅಧ್ಯಕ್ಷ ಪ್ರಸಾದ್ ಶೆಟ್ಟಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.