PSI on patrol assaults driver
ಚಿಂತಾಮಣಿ: ಬೆಂಗಳೂರು ರಸ್ತೆಯ ಚಿನ್ನಸಂದ್ರ ಬಳಿ ಮಧ್ಯರಾತ್ರಿವರೆಗೂ ತೆರೆದಿದ್ದ ಜಮ್ ಜಮ್ ಹೋಟೆಲ್ ಬಂದ್ ಮಾಡುವಂತೆ ಸೂಚಿಸಿದ ಪಿಎಸ್ಐ ನಾಗಮ್ಮ(28)ಮತ್ತು ಚಾಲಕ ವೇಣುಗೋಪಾಲ (50) ಮೇಲೆ ಆರು ಮಂದಿ ಹಲ್ಲೆ ಮಾಡಿದ್ದಾರೆ.
ಗುರುವಾರ ರಾತ್ರಿ ಗಸ್ತಿನಲ್ಲಿದ್ದಾಗ ಮಧ್ಯರಾತ್ರಿಯಾದರೂ ಹೋಟೆಲ್ ತೆರೆದಿದ್ದನ್ನು ಗಮನಿಸಿ ಬಾಗಿಲು ಬಂದ್ ಮಾಡುವಂತೆ ಮಾಲೀಕ ಶಾಹೀದ್ಖಾನ್ಗೆ ಹೇಳುತ್ತಿದ್ದಾಗ ತಾಲೂಕಿನ ಆಲಂಬಗಿರಿ ನಿವಾಸಿಗಳಾದ ನಾಗೇಂದ್ರ, ನವೀನ್ ಮತ್ತು ನರೇಂದ್ರ ಯಾದವ್ ಹಾಗೂ ಬೆಂಗಳೂರಿನ ಯಲಹಂಕದ ನಿವಾಸಿ ಪುನೀತ್ ಹಾಗೂ ಇನ್ನಿಬ್ಬರು ಹಲ್ಲೆ ಮಾಡಿದ್ದಾರೆ.
ಗುಂಪಿನಿಂದ ಹಲ್ಲೆ: ಪಿಎಸ್ಐ ನಾಗಮ್ಮ, ಚಾಲಕ ವೇಣುಗೋಪಾಲ ಚಿಂತಾಮಣಿ ನಗರ, ಬೂರಗಮಾಕಲಹಳ್ಳಿ, ಮಾಡಿಕೆರೆ ಕ್ರಾಸ್, ಕುರುಟಹಳ್ಳಿ ಕ್ರಾಸ್ನಿಂದ ಗಸ್ತು ಮುಗಿಸಿಕೊಂಡು ಜೀಪ್ನಲ್ಲಿ ಚಿನ್ನಸಂದ್ರ ಬಳಿ ರಾತ್ರಿ ಸುಮಾರು 12.40ಕ್ಕೆ ಬಂದಿದ್ದಾರೆ. ತಡ ರಾತ್ರಿಯಾದರೂ ಹೋಟೆಲ್ ತೆಗೆದಿದ್ದನ್ನು ಗಮನಿಸಿ ಅಲ್ಲಿಗೆ ತೆರಳಿದ್ದಾರೆ.
ಹೋಟೆಲ್ ಬಳಿ ಸುಮಾರು 10 ಜನರ ಗುಂಪು ಇರುವುದನ್ನು ಗಮನಿಸಿ ಬಾಗಿಲು ಮುಚ್ಚಲು ಚಾಲಕ ಎಚ್.ಸಿ.ವೇಣುಗೋಪಾಲ ಕೆಳಗಿಳಿದು ಸೂಚಿಸಿದಾಗ ಗುಂಪು ಚಾಲಕನೊಂದಿಗೆ ಮಾತಿನ ಚಕಮಕಿ ನಡೆಸಿ ಹಲ್ಲೆ ಮಾಡಿದೆ. ಆಗ ಪಿಎಸ್ಐ ನಾಗಮ್ಮ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸುತ್ತಿರುವಾಗ ನಾಗೇಂದ್ರ ಎಂಬಾತ ಪಿಎಸ್ಐ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ.
ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.