ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಜಯನಗರ 3ನೇ ಹಂತದ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ತನಿಷಾ ಕಾರ್ತಿಕ್ ಟಾಪರ್ ಆಗಿದ್ದಾರೆ.
- ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್‌ಗಳ ಪ್ರವೇಶದ ಸಿಇಟಿ ಫಲಿತಾಂಶ ಪ್ರಕಟ
- ಎಲ್ಲ ಏಳೂ ವಿಭಾಗಗಳಲ್ಲಿಯೂ ರಾಜ್ಯಪಠ್ಯಕ್ರಮ ಮಂಡಳಿಗಳ ಮಕ್ಕಳಿಗೇ ಮೊದಲ ಸ್ಥಾನ
- ಟಾಪ್ 100ರಲ್ಲಿ 81 ಸ್ಥಾನ ರಾಜ್ಯದ ಪರೀಕ್ಷಾ ಮಂಡಳಿಗಳ ಸಿಂಹಪಾಲು
ಬೆಂಗಳೂರು: ಪ್ರತಿ ಬಾರಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಪಠ್ಯಕ್ರಮದ ವಿದ್ಯಾರ್ಥಿಗಳ ಪಾಲಾಗುತ್ತಿದ್ದ ವೃತ್ತಿಪರ ಕೋರ್ಸ್‌ಗಳ ಸಿಇಟಿ ಟಾಪರ್‌ಗಳ ಸ್ಥಾನವು ಈ ಬಾರಿ ರಾಜ್ಯಪಠ್ಯಕ್ರಮದ ವಿದ್ಯಾರ್ಥಿಗಳೇ ಸಿಂಹಪಾಲು ಪಡೆದಿದ್ದಾರೆ. ಮಾತ್ರವಲ್ಲ, ಟಾಪ್-10ರಲ್ಲಿ ಸರ್ಕಾರಿ ಕಾಲೇಜು ವಿದ್ಯಾರ್ಥಿಯು ಸೇರಿರುವುದು ವಿಶೇಷ ಸಂಗತಿಗಳಲ್ಲಿ ಒಂದಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ನೇ ಸಾಲಿನಲ್ಲಿ ವಿವಿಧ ವೃತ್ತಿಪರ ಕೋರ್ಸುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳ ಪ್ರವೇಶಕ್ಕೆ ಏಪ್ರಿಲ್‌ನಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ(ಯುಜಿಸಿಇಟಿ-26) ಫಲಿತಾಂಶವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಅವರು ಶನಿವಾರ ಮಲ್ಲೇಶ್ವರದ ಪ್ರಾಧಿಕಾರದ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಿದರು.
ಸಾಮಾನ್ಯವಾಗಿ ಸಿಇಟಿ, ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಅದರಲ್ಲಿಯೂ ಕೇಂದ್ರ ಪಠ್ಯಕ್ರಮಕ್ಕೆ ಮೀಸಲಾಗಿವೆ ಎಂಬ ನಂಬಿಕೆಯನ್ನು ಈ ಬಾರಿಯ ಲಿತಾಂಶವು ಹುಸಿಗೊಳಿಸಿದೆ.
ಕಳೆದ ವರ್ಷ ಇಂಜಿನಿಯರಿಂಗ್ ವಿಭಾಗದಲ್ಲಿ ಟಾಪ್ 10ರಲ್ಲಿ 7 ಅಭ್ಯರ್ಥಿಗಳು ಸಿಬಿಎಸ್‌ಇ ಪಠ್ಯಕ್ರಮದವರಾಗಿದ್ದರು. ಆದರೆ, ಈ ಬಾರಿ ಇಂಜಿನಿಯರಿಂಗ್ ಟಾಪ್ 10ರಲ್ಲಿ ಕೇವಲ ಒಂದು ಸ್ಥಾನ ಮಾತ್ರ ಸಿಬಿಎಸ್‌ಇ ವಿದ್ಯಾರ್ಥಿಗಳ ಪಾಲಾಗಿದ್ದು, ಉಳಿದ ಸ್ಥಾನಗಳು ರಾಜ್ಯಪಠ್ಯಕ್ರಮಕ್ಕೆ ಒಲಿದಿವೆ. ಇನ್ನು ಎಲ್ಲ (ಏಳು) ವಿಭಾಗಗಳ ಟಾಪ್ 10 ರ‌್ಯಾಂಕ್‌ಗಳಲ್ಲಿ ಇಬ್ಬರು ಸಿಬಿಎಸ್‌ಇ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲರೂ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಖುಷ್ಬು ಗೋಯಲ್ ಚೌದರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ, ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಉಪಸ್ಥಿತರಿದ್ದರು.
ಸಿಬಿಎಸ್‌ಇ ಹಿಂದುಳಿಯಲು ಕಾರಣವೇನು?
ಈ ವರ್ಷ ಟಾಪ್ 100 ಇಂಜಿನಿಯರಿಂಗ್ ರ‌್ಯಾಂಕ್‌ಗಳಲ್ಲಿ 81 ಸ್ಥಾನಗಳನ್ನು ಪಡೆಯುವ ಮೂಲಕ ರಾಜ್ಯಪಠ್ಯಕ್ರಮ ಮಂಡಳಿ ವಿದ್ಯಾರ್ಥಿಗಳು ಪಾರುಪತ್ಯ ಮೆರೆದಿದ್ದಾರೆ. ಶಿಕ್ಷಣ ತಜ್ಞರ ಪ್ರಕಾರ, ಈ ವರ್ಷ ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶಗಳಲ್ಲಿನ ಕುಸಿತವೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ವರ್ಷ ಶೇ.88.39 ಇದ್ದ ಸಿಬಿಎಸ್‌ಇ 12 ನೇ ತರಗತಿಯ ಫಲಿತಾಂಶ ಈ ಬಾರಿ ಶೇ.83.29ಕ್ಕೆ ಕುಸಿದಿದೆ.
2.92 ಲಕ್ಷ ಅಭ್ಯರ್ಥಿಗಳು ಕೌನ್ಸೆಲಿಂಗ್ ಅರ್ಹತೆ
ಒಟ್ಟು 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 3.09 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟು 2.92 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಕೌನ್ಸೆಲಿಂಗ್ ಮೂಲಕ ಬೇರೆ ಬೇರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಈ ಬಾರಿ ಅರ್ಹತೆ ಪಡೆದಿದ್ದಾರೆ.
ಈ ಪೈಕಿ ಇಂಜಿನಿಯರಿಂಗ್ ಕೋರ್ಸು ಪ್ರವೇಶಕ್ಕೆ 2,82,603 ವಿದ್ಯಾರ್ಥಿಗಳು, ಬಿಎಸ್ಸಿ (ಕೃಷಿ, ತೋಟಗಾರಿಕೆ, ಆಹಾರ ವಿಜ್ಞಾನ) ಪ್ರವೇಶಕ್ಕೆ 2,09,220 ಮಂದಿ, ಪಶುವೈದ್ಯಕೀಯಕ್ಕೆ 2,12,909, ಬಿ-ಫಾರ್ಮಾಗೆ 2,86,965, ಫಾರ್ಮಾ-ಡಿ ಪ್ರವೇಶಕ್ಕೆ 2,86,965, ಬಿಎಸ್ಸಿ ನರ್ಸಿಂಗ್ ಕೋರ್ಸು ಪ್ರವೇಶಕ್ಕೆ 2,18,785 ವಿದ್ಯಾರ್ಥಿಗಳು ಮತ್ತು ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕೋರ್ಸು ಪ್ರವೇಶಕ್ಕೆ 2,12,730 ಅರ್ಹತೆ ಪಡೆದುಕೊಂಡಿದ್ದಾರೆ.
ಭೌತಶಾಸ, ರಸಾಯನಶಾಸಕ್ಕೆ ಎರಡು ಕೃಪಾಂಕ
ಪರೀಕ್ಷೆ ಬಳಿಕ ತಾತ್ಕಾಲಿಕ ಸರಿಯುತ್ತರಗಳನ್ನು ಬಿಡುಗಡೆ ಮಾಡಿ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ತಜ್ಞರ ಸಮಿತಿಯು ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಭೌತಶಾಸ ಹಾಗೂ ರಸಾಯನಶಾಸದ ತಲಾ ಒಂದು ಪ್ರಶ್ನೆಗೆ ಎರಡು ಕೃಪಾಂಕಗಳನ್ನು ನೀಡಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತ 2 ಸೇರಿ ರ‌್ಯಾಂಕ್
ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ -1 ಮತ್ತು 2 ಪರೀಕ್ಷೆಗಳ ಪೈಕಿ ಯಾವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಬಂದಿದೆಯೋ ಅದನ್ನು ಪರಿಗಣಿಸಿ ರ‌್ಯಾಂಕ್ ನೀಡಲಾಗಿದೆ. ಸಿಇಟಿ ಬರೆದಿದ್ದ ರಾಜ್ಯದ ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳ ಅಂಕಗಳನ್ನು ನೇರವಾಗಿ ಆಯಾ ಮಂಡಳಿ ವೆಬ್‌ಸೈಟ್‌ನಿಂದ ಪಡೆಯಲಾಗಿದೆ.