ಯಾದಗಿರಿ ಡಿಸಿ ಕಚೇರಿಯಲ್ಲಿ ಬುಧವಾರ ಕರೆದಿದ್ದ ಜಿಲ್ಲಾ ಮಟ್ಟದ ಸಮಿತಿ ಮತ್ತು ಅಂಗವಿಕಲರ ಕುಂದು&ಕೊರತೆ ಸಭೆಯಲ್ಲಿ ಜಿಲ್ಲಾಧಿಕಾರಿ ಪಾಂಡ್ವೆ ರಾಹುಲ್ ತುಕರಾಮ ಮಾತನಾಡಿದರು. ಜಿಪಂ ಸಿಇಒ ಲವೀಶ್ ಒರ್ಡಿಯಾ, ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಇತರರಿದ್ದರು.
- ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಸೂಚನೆ
- ಜಿಲ್ಲಾ ಮಟ್ಟದ ಕುಂದು ಕೊರತೆ ಸಭೆ
ಯಾದಗಿರಿ: ಅಂಗವಿಕಲರಿಗಾಗಿ ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಯೋಜನೆಗಳ ಲಾಭ ಸಕಾಲಕ್ಕೆ ದೊರಕಿಸುವ ಜತೆಗೆ ಅವರಿಗಾಗಿ ಮೀಸಲಾದ ಅನುದಾನವನ್ನು ಸಮರ್ಪಕವಾಗಿ ಬಳಸುವಂತೆ ಜಿಲ್ಲಾಧಿಕಾರಿ ರಾಹುಲ್ ತುಕರಾಮ ಪಾಂಡ್ವೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಮಟ್ಟದ ಸಮಿತಿ ಮತ್ತು ವಿಕಲಚೇತನರ ಕುಂದು&ಕೊರತೆ ಕುರಿತು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಅಂಗವಿಕಲರ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ವಿಶೇಷ ಚೇತನರ ಅನುದಾನದಡಿ ಸಿಗಬೇಕಾದ ಸೌಲಭ್ಯ ಹಾಗೂ ಮೀಸಲು ಅನುದಾನವನ್ನು ಸಮರ್ಪಕವಾಗಿ ಬಳಸುವಂತೆ ನೋಡಿಕೊಳ್ಳುವಂತೆ ತಾಕೀತು ಮಾಡಿದರು.
ಸುರಪುರ ತಾಲೂಕಿನ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ನಿಗಮದ ಬಸ್ಗಳಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಮೀಸಲಿರಿಸಿದ ಆಸನಗಳು ಲಭ್ಯವಿಲ್ಲದ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ, ಜಿಲ್ಲಾಧಿಕಾರಿಗಳು ಮನವಿಗೆ ಸ್ಪಂದಿಸಿ ತಣ ಕ್ರಮಕೈಗೊಳ್ಳಲು ವಿಭಾಗೀಯ ನಿಯಂತ್ರಕರು, ಕೆಕೆಆರ್ಟಿಸಿ ರವರಿಗೆ ಸೂಚಿಸಿದರು.
ಶ್ರವಣ ದೋಷವಿರುವ ಅಂಗವಿಕಲರಿಗೆ ಬೆರಾಟೆಸ್ಟ್ ಹಾಗೂ ಸ್ಪೆನಲ್ ಕಾರ್ಡ್, ಫಿಸಿಯೋಥೆರಪಿ ಚಿಕಿತ್ಸೆ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿಲ್ಲೆಯ ವಿವಿಧ ತರಹದ ಅಂಗವಿಕಲರು ತಮಗೆ ಜಾರಿಯಾದ ಪಿಂಚಣಿ ರದ್ದಾದ, ತಡೆ ಹಿಡಿದ ಕುರಿತು ಸಭೆಯ ಗಮನಕ್ಕೆ ತಂದರು. ಕುಂದು ಕೊರತೆ ಸಭೆಯಲ್ಲಿ ವಸತಿ ಯೋಜನೆಯಲ್ಲಿ ಮೀಸಲಾತಿ, ಬಸ್ ನಿಲ್ದಾಣಗಳ ಮಳಿಗೆಗಳ ವಿತರಣೆಯಲ್ಲಿ ಮಿಸಲಾತಿ, ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಅಂಗವಿಕಲರ ಭವನ ನಿರ್ಮಿಸಲು ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗ್ರಾಮಿಣ ಪುನರ್ವಸತಿ ಕಾರ್ಯಕರ್ತ ವಿಶ್ವನಾಥರೆಡ್ಡಿ ಮಾತನಾಡಿ, ಎಲ್ಲ ಅಂಗವಿಕಲರ ಸಮಸ್ಯೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಸ್ಥಳದಲ್ಲಿ ಕ್ರಮ ಕೈಗೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರಣೇಶ್, ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧೋದ್ದೇಶ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ವಿಕಲಚೇತನರು ಹಾಗೂ ಎಪಿಡಿಆರ್ಪಿಡಿ ಸಂಸ್ಥೆ ಸಿಬ್ಬಂದಿ ಇತರರಿದ್ದರು. ಅಂಗವಿಕಲ ಕಲ್ಯಾಣಾಧಿಕಾರಿ ಶರಣಪ್ಪ ಸ್ವಾಗತಿಸಿ ಅಗತ್ಯ ಮಾಹಿತಿ ನೀಡಿದರು.
ಶೌಚಗೃಹ ನಿರ್ಮಾಣಕ್ಕೆ ತಾಕೀತು
ವಡಗೇರಾ ತಾಲೂಕಿನ ವಿಕಲಚೇತನ ವ್ಯಕ್ತಿಯ ಮನೆಯಲ್ಲಿ ಶೌಚಗೃಹ ಇಲ್ಲದ ಕುರಿತು ಸಭೆಯ ಗಮನಕ್ಕೆ ತಂದಾಗ ಜಿಪಂ ಸಿಇಒ ಲವೀಶ್ ಒರ್ಡಿಯಾ ತಣವೇ ಮನವಿಯನ್ನು ಸಿಟಿಜೆನ್ ಪೋರ್ಟಲ್ನಲ್ಲಿ ನೊಂದಾಯಿಸಿ ಅಂಗವಿಕಲರಿಗೆ ಶೌಚಗೃಹ ನಿರ್ಮಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಲು ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಿದರು.