ಹುಮನಾಬಾದ್ ತಾಲೂಕಿನ ಮಲ್ಕಾಪುರವಾಡಿ ಗ್ರಾಮಕ್ಕೆ ಏಳು ಗಂಟೆ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಕಲ್ಪಿಸುವಂತೆ ಆಗ್ರಹಿಸಿ ಹುಮನಾಬಾದ್ ಕೆಪಿಟಿಸಿಎಲ್ ಕಚೇರಿಯಲ್ಲಿ ಸೋಮವಾರ ಎಇಇ ರಮೇಶಕುಮಾರ ಮೈನಾಳೆ ಅವರಿಗೆ ರೈತರು ಮನವಿ ಸಲ್ಲಿಸಿದರು. ರೈತರಾದ ವೈಜಿನಾಥ ಪಾಟೀಲ್, ಆನಂದ ದಾಡಗಿ, ಈಶ್ವರ ಚಿದ್ರಿ, ರೇವಣಯ್ಯ ಸ್ವಾಮಿ ಇತರರಿದ್ದರು.
- ಹುಮನಾಬಾದ್ನಲ್ಲಿ ರೈತರ ಪ್ರತಿಭಟನೆ
ಹುಮನಾಬಾದ್ ಹಳ್ಳಿಖೇಡ (ಬಿ) ಸರ್ಕಲ್ ವ್ಯಾಪ್ತಿಯ ಮಲ್ಕಾಪುರವಾಡಿ ಗ್ರಾಮದ ಕೃಷಿ ಪಂಪ್ಸೆಟ್ಗಳಿಗೆ ನಿಗಧಿಯಂತೆ ಏಳು ಗಂಟೆ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮದ ರೈತರು ಸೋಮವಾರ ಪಟ್ಟಣದ ಕೆಪಿಟಿಸಿಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇಲಾಖೆೆಯ ಎಇಇ ರಮೇಶಕುಮಾರ ಮೈನಾಳೆ ಅವರಿಗೆ ಮನವಿ ಸಲ್ಲಿಸಿದ ರೈತರು, ಕಳೆದ ಒಂದು ತಿಂಗಳಿಂದ ಮಲ್ಕಾಪುರವಾಡಿ ಗ್ರಾಮದ ಕೃಷಿ ಜಮೀನುಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಬೇನಚಿಂಚೋಳಿ ಸಮೀಪದ ಜಿವೋಎಸ್ (ಜಿಒಎಸ್) ತೆರೆಯುತ್ತಿರುವ ಕಾರಣ ನಿಗದಿತ ಏಳು ಗಂಟೆಗಳ ನಿರಂತರ ತ್ರಿಫೇಸ್ ವಿದ್ಯುತ್ ಸಿಗುತ್ತಿಲ್ಲ. ಇದರಿಂದ ಬೆಳೆಗಳಿಗೆ ನೀರುಣಿಸಲು ತೊಂದರೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ರೈತರ ಹಾಗೂ ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸದೆ, ನಿರಂತರ ವಿದ್ಯುತ್ ಕೊರತೆ ಉಂಟಾಗುವಂತೆ ವರ್ತಿಸುತ್ತಿರುವ ಶಾಖಾಧಿಕಾರಿಯ ವಿರುದ್ಧ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಪ್ರತಿದಿನ ಏಳು ಗಂಟೆಗಳ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಕೆ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಎಇಇ ರಮೇಶಕುಮಾರ ಮೈನಾಳೆ ಅವರು ಸಮಸ್ಯೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಮದ ರೈತರಾದ ವೈಜಿನಾಥ ಪಾಟೀಲ್, ಆನಂದ ದಾಡಗಿ, ಈಶ್ವರ ಚಿದ್ರಿ, ರೇವಣಯ್ಯ ಸ್ವಾಮಿ, ಶಿವರಾಜ ಕಲಗೊಂಡ, ವೈಜಿನಾಥ ಮಿತ್ರ, ಶಿವರಾಜ ಜವಳಗಿ, ಜಗನಾಥ ಕಠಳ್ಳಿ ಇತರರಿದ್ದರು.