ಯಳಂದೂರು ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದರು.
- ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ರಾಘವೇಂದ್ರ
- ಆಶ್ರಯ ಬಡಾವಣೆಯಲ್ಲಿರುವ ಇಂದಿರಾ ಕ್ಯಾಂಟೀನ್
ಪಟ್ಟಣದ ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಊಟ-ತಿಂಡಿ ನೀಡಬೇಕು. ಜತೆಗೆ ಮೆನು ಪ್ರಕಾರವೇ ತಯಾರಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ರಾಘವೇಂದ್ರ ಎಚ್ಚರಿಕೆ ನೀಡಿದರು.
ಪಟ್ಟಣದ ಆಶ್ರಯ ಬಡಾವಣೆಯಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿ ನೀಡುತ್ತಿರುವ ಊಟ-ತಿಂಡಿ ಸವಿದು ಮಾತನಾಡಿದರು. ಇಂದಿರಾ ಕ್ಯಾಂಟೀನ್‌ನ ಸಿಬ್ಬಂದಿ ನಿತ್ಯ ಇಲ್ಲಿ ಪಾಲಿಸಬೇಕಿರುವ ನಿಯಮಗಳತ್ತ ಗಮನ ಹರಿಸಬೇಕು. ಶುಚಿತ್ವ ಕಾಪಾಡಿಕೊಳ್ಳುವ ಜತೆಗೆ ಶುದ್ಧ ಕುಡಿಯುವ ನೀರನ್ನು ಇಡಬೇಕು. ಪ್ರತಿ ದಿನವೂ ಮೆನುವಿನಲ್ಲಿ ನೀಡಿರುವ ಊಟ-ತಿಂಡಿಗಳನ್ನೇ ಮಾಡಬೇಕು ಎಂದು ಸೂಚನೆ ನೀಡಿದರು.
ಆಹಾರ ಪದಾರ್ಥಗಳು, ತರಕಾರಿಗಳನ್ನು ನಿಗದಿಯಂತೆ ಬಳಕೆ ಮಾಡಬೇಕು.ಅಡುಗೆ ತಯಾರಿಸುವಾಗ ತಲೆಗೆ ಮಾಸ್ಕ್, ಕೈಗವಸುಗಳನ್ನು ಧರಿಸಬೇಕು. ಊಟ ತಿಂಡಿ ಬಡಿಸುವಾಗಲೂ ಈ ನಿಯಮಗಳನ್ನು ಪಾಲಿಸಬೇಕು. ಅಡುಗೆ ಪಾತ್ರೆಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ಆಹಾರ ಪದಾರ್ಥಗಳನ್ನು ಮುಚ್ಚಿಡಬೇಕು. ತಟ್ಟೆ ಪಾತ್ರೆಗಳನ್ನು ತೊಳೆದು ಬಳಸಬೇಕು. ಗ್ರಾಹಕರು ಎಷ್ಟು ಸಂಖ್ಯೆಯಲ್ಲಿ ಬರುತ್ತಾರೋ ಅಷ್ಟೇ ಪ್ರಮಾಣದ ಟೋಕನ್ ನೀಡಬೇಕು ಎಂದು ಹೇಳಿದರು.
ಸಿಸಿ ಕ್ಯಾಮರಾದಲ್ಲಿನ ಫೂಟೇಜ್‌ಗಳನ್ನು ಎರಡು ದಿನಕ್ಕೊಮ್ಮೆ ಪಂಚಾಯಿತಿಗೆ ತಲುಪಿಸಬೇಕು. ಅಲ್ಲದೆ ಕ್ಯಾಂಟೀನ್ ಆವರಣ ಶುಚಿಯಾಗಿಟ್ಟುಕೊಳ್ಳಬೇಕು. ಉಳಿದ ಆಹಾರ ಪದಾರ್ಥಗಳನ್ನು ನಿಗದಿತ ಸ್ಥಳದಲ್ಲೇ ವಿಲೇವಾರಿ ಮಾಡಬೇಕು. ಅಲ್ಲದೆ ರಾತ್ರಿ ವೇಳೆ ಇಲ್ಲಿಗೆ ಯಾರೂ ಊಟಕ್ಕೆ ಬರುವುದಿಲ್ಲ. ಹಾಗಾಗಿ ಬೆಳಗ್ಗೆ ಹಾಗೂ ಮಧ್ಯಾಹ್ನದ ಊಟವನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪಪಂನ ಮಲ್ಲಿಕಾರ್ಜುನ ಹಾಗೂ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಇದ್ದರು.