ಜಮಖಂಡಿ ನಗರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ನಾಡೋಜ ಜಗದೀಶ ಗುಡಗುಂಟಿ ಉದ್ಘಾಟಿಸಿದರು. ಡಾ. ವಿಜಯಲಕ್ಷ್ಮೀ ತುಂಗಳ, ತಹಸೀಲ್ದಾರ್ ಅನೀಲ ಬಡಿಗೇರ, ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಲಕ್ಷ್ಮೀಕಾಂತ ದುದಗಿ ಇತರರಿದ್ದರು.
- ಶಾಸಕ ಜಗದೀಶ ಗುಡಗುಂಟಿ ಭರವಸೆ
- ಪ್ರಶಸ್ತಿ ಪ್ರದಾನ ಸಮಾರಂಭ
ಜಮಖಂಡಿ: ಪತ್ರಕರ್ತರ ಸಾಮಾಜಿಕ ಭದ್ರತೆಗಾಗಿ ಸರ್ಕಾರದಿಂದ ವಿಮಾ ಸೌಲಭ್ಯ, ಸರ್ಕಾರಿ ದರದಲ್ಲಿ ನಿವೇಶನ ಹಾಗೂ ಪಿಂಚಣಿ ಸೇರಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಭರವಸೆ ನೀಡಿದರು.
ನಗರದ ಪತ್ರಿಕಾಭವನದಲ್ಲಿ ಭಾನುವಾರ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾರಂಗ ಸಮಾಜದ ಕಣ್ಣು-ಕಿವಿಯಾಗಿದ್ದು, ಜನರಲ್ಲಿ ಜಾಗತಿ ಮೂಡಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಆದರೆ ತಾಲೂಕು ಮಟ್ಟದ ಪತ್ರಕರ್ತರಿಗೆ ಅವರ ಸೇವೆಗೆ ತಕ್ಕ ಗೌರವ ಹಾಗೂ ಸಂಭಾವನೆ ಸಿಗುತ್ತಿಲ್ಲ ಎಂಬುದು ವಾಸ್ತವ ಎಂದು ಹೇಳಿದರು. ಪತ್ರಿಕಾಭವನದ ದುರಸ್ತಿ ಹಾಗೂ ವೇದಿಕೆಗೆ ಅಗತ್ಯ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು.
ದಿ. ಬಾಬುರೆಡ್ಡಿ ತುಂಗಳ ಪ್ರಶಸ್ತಿಯ ದತ್ತಿದಾನಿ ಡಾ. ವಿಜಯಲರ್ಷ್ಮೀ ತುಂಗಳ ಮಾತನಾಡಿ, ಬಾಬುರೆಡ್ಡಿ ತುಂಗಳ ಅವರು ಪತ್ರಿಕೋದ್ಯಮದಿಂದ ಸಾರ್ವಜನಿಕ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಿದ ಸಾಧಕರಾಗಿದ್ದು, ಅವರ ಬದುಕು ಯುವ ಪತ್ರಕರ್ತರಿಗೆ ಪ್ರೇರಣೆಯಾಗಿದೆ ಎಂದರು.
ತಹಸೀಲ್ದಾರ್ ಅನೀಲ ಬಡಿಗೇರ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಪತ್ರಿಕೆಗಳು ಸುದ್ದಿ ಮಾತ್ರವಲ್ಲದೆ ಶಿಕ್ಷಣ, ಆರೋಗ್ಯ, ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿ ವಿವಿಧ ಕ್ಷೇತ್ರಗಳ ಮಾಹಿತಿ ನೀಡುವ ಮೂಲಕ ಸಮಾಜದ ಅಭಿವದ್ಧಿಗೆ ಕೊಡುಗೆ ನೀಡುತ್ತಿವೆ. ಯುವಜನರು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು.
ದಿ. ಬಾಬುರೆಡ್ಡಿ ತುಂಗಳ ಸ್ಮರಣಾರ್ಥ ಪ್ರಶಸ್ತಿಯನ್ನು ಪತ್ರಕರ್ತ ಅಪ್ಪು ಪೋತರಾಜ ಅವರಿಗೆ ಪ್ರದಾನ ಮಾಡಲಾಯಿತು.
ಶೈಕ್ಷಣಿಕ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಾದ ವೈಷ್ಣವಿ ಗೋಪಾಲ ಪಾಟೀಲ, ಅನುಶ್ರೀ ಅಪ್ಪು ಪೋತರಾಜ, ಚಿರಾಗ ಲಕ್ಷ್ಮೀಕಾಂತ ದುದಗಿ, ಸ್ನೇಹಾ ಪ್ರವೀಣ ಕುಲಕರ್ಣಿ ಹಾಗೂ ಸಾಕ್ಷಿ ಪ್ರವೀಣ ಕುಲಕರ್ಣಿ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪತ್ರಿಕೆ ವಿತರಕರು ಹಾಗೂ ಪೌರಕಾರ್ಮಿಕರನ್ನೂ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಲಕ್ಷ್ಮೀಕಾಂತ ದುದಗಿ ವಹಿಸಿದ್ದರು. ತೋಟಗಾರಿಕೆ ಇಲಾಖೆ ಅಧಿಕಾರಿ ಸಚಿನ್ ಮಾಚಕನೂರ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಸಂತೋಷ ಬಾಡಗಿ, ಗೋಪಾಲ ಪಾಟೀಲ ಸೇರಿ ಹಲವರು ಉಪಸ್ಥಿತರಿದ್ದರು.
ಜಾದುಗಾರ ಅಯೂಬ್ ಧನ್ನೂರ ಅವರ ಜಾದೂ ಪ್ರದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ವಿಜಯಲಕ್ಷ್ಮೀ ದುದಗಿ ಪ್ರಾರ್ಥಿಸಿದರು. ಎಂ.ಎನ್. ನದ್ಾ ಸ್ವಾಗತಿಸಿದರು. ಮಲ್ಲಿಕಾರ್ಜುನ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು. ಕೇಶವ ಕುಲಕರ್ಣಿ ವಂದಿಸಿದರು.