- ರಿಜಿಸ್ಟ್ರೀಗೆ ಹೈಕೋರ್ಟ್ ನಿರ್ದೇಶನ
- ಸ್ವಯಂಪ್ರೇರಿತ ಅರ್ಜಿ ವಿಚಾರಣೆ
ಬೆಂಗಳೂರು: ಮಕ್ಕಳ ಪಾಲನೆ ಹಕ್ಕುಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ರೂಪಿಸಲು ರಚಿಸಲಾಗಿರುವ ಸಮಿತಿಯು ನಡೆಸಿರುವ ಸಭೆ ಮತ್ತು ಆ ಬಳಿಕದ ಕ್ರಮಗಳ ಕುರಿತು ಮಾಹಿತಿ ಸಲ್ಲಿಸುವಂತೆ ರಿಜಿಸ್ಟ್ರೀಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮಕ್ಕಳ ಪಾಲನೆ ಹಕ್ಕಿನ ಮಾರ್ಗಸೂಚಿಗಳ ರಚನೆ ಮತ್ತು ಅನುಷ್ಠಾನದ ಉದ್ದೇಶದಿಂದ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಸಿವರಾಮನ್ ಮತ್ತು ಟಿ.ಪಿ. ವಿವೇಕಾನಂದ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಸಮಿತಿಯು ಜೂ.24ರಂದು ಸಭೆ ನಡೆಸಿದ ಎಂಬ ಅಂಶವನ್ನು ಗಮನಿಸಿದ ನ್ಯಾಯಪೀಠ, ಆ ಸಭೆಯ ನಡಾವಳಿ, ನಂತರ ಕೈಗೊಂಡಿರುವ ಕ್ರಮಗಳು ಮತ್ತು ಮುಂದಿನ ಸಭೆಯ ದಿನಾಂಕದ ಮಾಹಿತಿಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಮಕ್ಕಳ ಪಾಲನೆ ವಿವಾದಗಳಲ್ಲಿ ಪಾಲಕರನ್ನು ಮನೋವೈಜ್ಞಾನಿಕ ಮೌಲ್ಯಮಾಪನಕ್ಕೆ ಕಳಿಸಿದಾಗ ವರದಿಗಳನ್ನು ಪಡೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಆದ್ದರಿಂದ, ಇಂತಹ ಮೌಲ್ಯಮಾಪನ ಅಗತ್ಯವಿರುವ ಪ್ರಕರಣಗಳಲ್ಲಿ ತಜ್ಞರ ನೆರವಿನಿಂದ ಹೈಕೋರ್ಟ್ನಲ್ಲಿಯೇ ಮಾಡಬಹುದೆ ಎಂಬ ಸಾಧ್ಯತೆಯ ಬಗ್ಗೆಯೂ ಪರಿಶೀಲನೆ ನಡೆಸುವಂತೆ ಪೀಠ ತಿಳಿಸಿದೆ.
ರಾಜ್ಯದಲ್ಲಿ ಯಾವುದೇ ಮಾರ್ಗಸೂಚಿಗಳು ಸದ್ಯ ಇಲ್ಲದೆ ಇರುವುದರಿಂದ, ಕೌಟುಂಬಿಕ ಮತ್ತು ವಿಚ್ಛೇಧನ ಪ್ರಕರಣಗಳಲ್ಲಿ ಮಕ್ಕಳ ಕಸ್ಟಡಿಗೆ ಸಂಬಂಧಿಸಿ ಕೊಲ್ಕತ್ತಾ ಹೈಕೋರ್ಟ್ ಅನುಮೋದಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ರಾಜ್ಯದ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಈ ಹಿಂದೆ ಮಧ್ಯಂತರ ನಿರ್ದೇಶನ ನೀಡಿತ್ತು.
ಪಾಲಕರ ಕಿತ್ತಾಟದಿಂದ ಮಕ್ಕಳಿಗೆ ಸಮಸ್ಯೆ:
ಪಾಲಕರ ಕಿತ್ತಾಟದಿಂದ ಮಕ್ಕಳು ಕಾನೂನು ಸಂರ್ಷದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿ ಹೈಕೋರ್ಟ್ ಈ ಅರ್ಜಿಯನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಮಗುವಿನ ಪಾಲನೆಯ ಕುರಿತು ಆದೇಶ ಮಾಡುವ ಮೊದಲು ಮಗುವಿನ ಮಾನಸಿಕ ಸ್ಥಿತಿಯನ್ನು ಮೌಲ್ಯಮಾಪನ ಮಾಡುವ ಅಗತ್ಯವಿದೆ. ವಿವಿಧ ವೈಯಕ್ತಿಕ ಕಾನೂನುಗಳಲ್ಲಿ ನೈಸರ್ಗಿಕ ಪಾಲಕತ್ವದ ವ್ಯಾಖ್ಯಾನದಲ್ಲಿ ಏಕರೂಪತೆಯಿಲ್ಲ. ಆದ್ದರಿಂದ ಸರ್ಕಾರವು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಕ್ರೋಢಿಕರಿಸಿ ಮಗುವಿನ ಮಾನಸಿಕ ಹಿತದೃಷ್ಟಿಯಿಂದ ಮಾರ್ಗಸೂಚಿ ರೂಪಿಸಬೇಕು ಎಂದು ಅರ್ಜಿಯಲ್ಲಿ ದಾಖಲಿಸಲಾಗಿತ್ತು.