ಕೆಂಭಾವಿ ಪಟ್ಟಣದ ಸ್ಪಂದನಾ ಶಾಲೆಯಲ್ಲಿ ದಿ.ಬಸವಂತ್ರಾಯ ಪಾಟೀಲ್ ಸ್ಮರಣಾರ್ಥ ಬುಧವಾರ ಹಮ್ಮಿಕೊಂಡ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ನಾಲ್ವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಶ್ರೀ ಚನ್ನಬಸವ ಶಿವಾಚಾರ್ಯ, ವಾಮನರಾವ ದೇಶಪಾಂಡೆ, ಡಿ.ಸಿ.ಪಾಟೀಲ್, ಮಹಿಪಾಲರೆಡ್ಡಿ ಡಿಗ್ಗಾವಿ ಇತರರಿದ್ದರು
- ಪಿಎಲ್ಡಿ ಬ್ಯಾಂಕ್ ನಿರ್ದೇಶಕ ದೇಶಪಾಂಡೆ ಸಲಹೆ
- > ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನ
ಕೆಂಭಾವಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷದ ಜತೆಗೆ ಉತ್ತಮ ಸಂಸ್ಕಾರವನ್ನು ಪಾಲಕರು ಕೊಡಿಸಬೇಕು ಎಂದು ಪಿಎಲ್ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ ಹೇಳಿದರು.
ಪಟ್ಟಣದ ಸ್ಪಂದನಾ ಶಾಲೆಯಲ್ಲಿ ಸ್ಪಂದನಾ ಗ್ರಾಮೀಣಭಿವೃದ್ಧಿ ಸಂಸ್ಥೆಯಿಂದ ದಿ.ಬಸವಂತ್ರಾಯ ಪಾಟೀಲ್ ಸ್ಮರಣಾರ್ಥ ಬುಧವಾರ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವೂ ಮಕ್ಕಳಿಗೆ ಹೇಳಿಕೊಡಬೇಕು ಎಂದು ಕಿವಿಮಾತು ಹೇಳಿದರು.
ಪಾಲಕರು ತಮ್ಮ ಮಕ್ಕಳಿಗೆ ಪ್ರೌಢಾವಸ್ಥೆಯವರೆಗೆ ತಮ್ಮ ಸ್ವಂತ ಊರುಗಳಲ್ಲಿಯೇ ಶಿಕ್ಷಣ ಕಲಿಸಬೇಕು. ಇದರಿಂದ ಮುಂದೆ ತಂದೆ-ತಾಯಿ ಮೇಲೆ ಭಕ್ತಿ ಗೌರವ ಹೆಚ್ಚುವುದರ ಜತೆಗೆ ಸ್ವಂತ ಊರು, ಬಂಧು-ಬಳಗ, ಸಂಸ್ಕಾರ, ಕಲೆ ಸೇರಿ ಹಲವು ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಲು ಸಾಧ್ಯ ಎಂದರು.
ಶಿಕ್ಷಕರಾಗಿದ್ದ ದಿ.ಬಸವಂತ್ರಾಯ ಪಾಟೀಲ್ ಅವರು ತಮ್ಮ ಇಡೀ ಜೀವನವನ್ನು ಶಿಕ್ಷಣಕ್ಕಾಗಿ ಮುಡುಪಿಟ್ಟಿದ್ದರು. ಅವರಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದು, ಅವರ ಕುಟುಂಬದ ಸದಸ್ಯರು ಅದೇ ದಾರಿಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಸಂಸ್ಥೆ ಕಾರ್ಯದರ್ಶಿ ಡಿ.ಸಿ.ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಮಕ್ಕಳ ಶ್ರೇಯೋಭಿವೃದ್ಧಿಗೆ ಪಟ್ಟಣದ ಎಲ್ಲ ಖಾಸಗಿ ಶಾಲೆಗಳು ಶ್ರಮ ವಹಿಸುತ್ತಿವೆ. ವಿಶೇಷವಾಗಿ 10ನೇ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಅಲ್ಲದೆ ದಿ.ಬಸವಂತ್ರಾಯ ಪಾಟೀಲ್ ಅವರ ಸ್ಮರಣಾರ್ಥ ನೀಡುವ ಈ ಪ್ರತಿಭಾ ಪುರಸ್ಕಾರ ಈ ವರ್ಷದಿಂದ ಆರಂಭವಾಗಿದ್ದು, ಈ ಕಾರ್ಯಕ್ರಮದ ಮೂಲಕ ಪಟ್ಟಣದ ವಿವಿಧ ಶಾಲೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿ ವರ್ಷ ವಿನೂತನ ಕಾರ್ಯಕ್ರಮದೊಂದಿಗೆ ಮಕ್ಕಳಿಗೆ ಉತ್ತೇಜಿಸಲಾಗುವುದು ಎಂದು ಹೇಳಿದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ ಮಾತನಾಡಿದರು. ನಂತರ ವಿದ್ಯಾರ್ಥಿಗಳಾದ ಶ್ವೇತಾ ಹಾಲಗಡ್ಲಿ, ಬದಿಹಾ ಅಫಾಫ್ ವಡಕೇರಿ, ನಿಶಾದ್ ವಡಕೇರಿ, ಮಹದ್ ಏಜಾಜ್ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ಹಾಗೂ 5 ಸಾವಿರ ರೂ. ನಗದು ನೀಡಿ ಗೌರವಿಸಲಾಯಿತು.
ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಗುಂಡುಗೌಡ ಯಾಳಗಿ, ಮುದಿಗೌಡ ಮಾಲಿ ಪಾಟೀಲ್, ಮಡಿವಾಳಪ್ಪಗೌಡ ಪೊಲೀಸ್ ಪಾಟೀಲ್, ಸಂಗಣ್ಣ ತುಂಬಗಿ, ಸಾಹೇಬಲಾಲ್ ಆಂದೇಲಿ, ವಿಕಾಸ ಸೊನ್ನದ, ಸಂಗಣ್ಣ ಎಂ.ತುಂಬಗಿ, ಮಧು ಬಂದೆ ಇದ್ದರು. ಬಂದೇನವಾಜ ನಾಲತವಾಡ ನಿರೂಪಿಸಿದರು. ಸುಗೂರಯ್ಯ ಇಂಡಿ ಸ್ವಾಗತಿಸಿದರು. ರೇವಣಸಿದ್ದಯ್ಯ ಮಠ ವಂದಿಸಿದರು.