Provide farmers with information on profitable crops. 
ರಾಜ್ಯ

ರೈತರಿಗೆ ಲಾಭದಾಯಕ ಬೆಳೆಗಳ ಮಾಹಿತಿ ನೀಡಿ

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳ ಬಗ್ಗೆ ಹಾಗೂ ಅಡಿಕೆ ತೆಂಗು ಬೆಳೆಗಳ ನಡುವೆ ಬೆಳೆಯಬಹುದಾದಂತಹ ಲಾಭದಾಯಕ ಬೆಳೆಗಳ ಕುರಿತು ಅಧಿಕಾರಿಗಳು ಕೃಷಿಕರಿಗೆ ಮಾರ್ಗದರ್ಶನ ನೀಡಬೇಕು ಎಂದು ಶಾಸಕ ಸಿ.ಬಿ.ಸುರೇಶ್​ ಬಾಬು ಸೂಚಿಸಿದರು.
ಪಟ್ಟಣದ ತೋಟಗಾರಿಕೆ ಇಲಾಖೆಯ ಕಚೇರಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿ ಮಾತನಾಡಿ, ತಾಲೂಕಿನಲ್ಲಿ ತೆಂಗಿನ ಬೆಳೆ ಹೆಚ್ಚಾಗಿದ್ದು, ಕೊಬ್ಬರಿಯನ್ನು ಹೊರತು ಪಡಿಸಿ ಅದರ ಉಪ ಉತ್ಪನ್ನಗಳ ತಯಾರಿಸುವ ಘಟಕಗಳ ಸ್ಥಾಪನೆ ಆಗಬೇಕು. ಗಣಿಭಾದಿತ ಪ್ರದೇಶಾಭಿವೃದ್ಧಿ ಯೊಜನೆಯಡಿ ಕೃಷಿಗೆ ಸಂಬಂಧಿಸಿದಂತೆ ಪ್ರಯೋಗಶಾಲೆ ತೆರೆಯುವ ಬಗ್ಗೆ ಸೂಚನೆ ನೀಡಿದ ಶಾಸಕರು, ತೆಂಗಿಗೆ ಬಿಳಿನೊಣದ ಹಾವಳಿ ತಡೆಯಲು ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಈ ಹಿಂದೆ ಡ್ರೋನ್​ ಬಳಸಿ ಔಷಧ ಸಿಂಪಡಿಸುವ ಕೆಲಸ ಮಾಡಿ ಯಶಸ್ವಿಯಾಗಲಿಲ್ಲ, ತೆಂಗಿನ ಮರಕ್ಕೆ ಕೆಳಭಾಗದಿಂದ ಸಿಂಪಡಿಸುವಂತಹ ಡ್ರೋನ್​ಗಳನ್ನು ಸರ್ಕಾರ ನೀಡಬೇಕೆಂದರು.
ಹಿರಿಯ ಸಹಾಯ ನಿರ್ದೇಶಕ ರಾಜಪ್ಪ ಮಾಹಿತಿ ನೀಡಿ ಕಳೆದ ಮೂರು ವರ್ಷಗಳಿಂದ ರಾಷ್ಟೀಯ ಮಿಷನ್​ ಯೋಜನೆಯಡಿ ಬೆಳೆಗಳಿಗೆ ಸಹಾಯಧನ, ಶೇಖರಣಾ ಘಟಕ ಮತ್ತು ಲಘು ಪೋಷಕಾಂಶಗಳಿಗೆ ಜೈವಿಕ ನಿಯಂತ್ರಕಗಳಿಂದ 1.42 ಕೋಟಿ ರೂ. ವೆಚ್ಚದಲ್ಲಿ 827 ಪಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.