ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತ್ಯುತ್ಸವವನ್ನು ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ಉದ್ಘಾಟಿಸಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ರೇಣುಕಾ ಮೂರ್ತಿ, ನಾಲ್ಕನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ನಿರ್ಮಲಾ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಚ್.ಎ.ಶಿಲ್ಪಾ, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಜೆ.ಎಸ್.ಪ್ರವಿಣ್, ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರನ್ ಇದ್ದರು.
ದೊಡ್ಡಬಳ್ಳಾಪುರ : ನ್ಯಾಯಾಂಗದಲ್ಲಿ ಎಲ್ಲ ಶೋಷಿತ ವರ್ಗದವರಿಗೆ ಸಮಾನ ನ್ಯಾಯ ಸಿಗುವ ವ್ಯವಸ್ಥೆಯಾಗಬೇಕಿದ್ದು, ನ್ಯಾಯಾಲಯಗಳು ನೊಂದವರ ಧ್ವನಿಯಾಗಬೇಕಿದೆ ಎಂದು ಸವೋರ್ಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.
ತಾಲೂಕು ವಕೀಲರ ಸಂಘದಿಂದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತಿ ಹಾಗೂ ರಾಜ್ಯ ವಕೀಲರ ಪರಿಷತ್ ಸದಸ್ಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ನ್ಯಾಯ ಅರಸಿ ಬರುವವರಿಗೆ ನ್ಯಾಯ ದೊರಕಿಸುವ ಜವಾಬ್ದಾರಿ ನ್ಯಾಯಾಂಗ ವ್ಯವಸ್ಥೆಯ ಮೇಲಿದೆ. ಯಾವುದೇ ತಾರತಮ್ಯ ಇರಬಾರದು. ಕೆಂಪೇಗೌಡರು ಎಲ್ಲ ಸಮುದಾಯದ ಏಳಿಗೆಗಾಗಿ ಮತ್ತು ಆರ್ಥಿಕವಾಗಿ ಅನುಕೂಲವಾಗುವ ದೃಷ್ಟಿಯಿಂದ ವಿವಿಧ ರೀತಿಯ ವ್ಯಾಪಾರಗಳು ಮತ್ತು ಕುಶಲಕರ್ಮಿಗಳಿಗಾಗಿ ಪೇಟೆಗಳನ್ನು ನಿರ್ಮಿಸಿಕೊಟ್ಟಿದ್ದರು.
ನೀರಿನ ವ್ಯವಸ್ಥೆಗಳ ಅಭಿವೃದ್ಧಿಗಾಗಿ ಕೆರೆಗಳು ನಿರ್ಮಿಸಿದ್ದರು. ಇದಲ್ಲದೇ ವಾಸ್ತುಶಿಲ್ಪ ಕ್ಷೇತ್ರಕ್ಕೂ ಕೆಂಪೇಗೌಡರ ಕೊಡುಗೆಯಿದೆ. ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಸಾಂಸತಿಕ ಕಾವಲು ಗೋಪುರ ನಿರ್ಮಿಸಿ ಜಾಗತಿಕ ಮತ್ತು ಪ್ರಾದೇಶಿಕ ವ್ಯಾಪಾರಕ್ಕೆ ಪ್ರೋತ್ಸಾಹ ನೀಡಿದರು. ಮಿಲಿಟರಿ ರಕ್ಷನೆ ಮತ್ತು ಕೋಟೆ ನಿಮಾರ್ಣಗಳಿಗೆ ಕೈ ಹಾಕಿದ ಅವರನ್ನು ನಾಡಪ್ರಭು ಎಂದು ಕರೆಯಲಾಯಿತು. ಅಂತಹ ಮಹನೀಯರ ಜನ್ಮದಿನವನ್ನು ಕರ್ನಾಟಕ ಸರ್ಕಾರ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಮಾತನಾಡಿ, ಕೆಂಪೇಗೌಡರು ಕಟ್ಟಿದ ನಾಡಿನಲ್ಲಿ ವಿಭಿನ್ನ ರೀತಿಯ ಕುಶಲಕರ್ಮಿಗಳು ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದಾರೆ. ಇದು ಕೆಂಪೇಗೌಡರ ದೂರದೃಷ್ಟಿಯ ಪ್ರತಿಕ ಎಂದು ಹೇಳಿದರು. ಈ ವೇಳೆ ವಕೀಲರ ಯಾವುದೇ ಸಮಸ್ಯೆಗಳು ಉದ್ಭವಿಸಿದರು ಅವುಗಳನ್ನು ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು.
ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಎನ್.ಶಿವಕುಮಾರ್, ಎಸ್.ಹರೀಶ್, ಎಂ.ದೇವರಾಜು, ಶಿವಮೂರ್ತಿ, ಪಿ.ವಿ.ಕಲ್ಪನಾ, ಕೆ.ಶೈಲಜಾ ಅವರನ್ನು ಸನ್ಮಾನಿಸಲಾಯಿತು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿರುವ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎರಡನೇ ಹೆಚ್ಚುವರಿ ನ್ಯಾಯಾಧೀಶ ರವಿ ಬೆಟಿಗಾರ್, ಬೆಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಗಿರೀಶ್ ಕುಮಾರ್, ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಕನಕರಾಜ್, ಉಪಾಧ್ಯಕ್ಷ ಕೆ.ಜಗನ್ನಾಥ್, ಜಂಟಿ ಕಾರ್ಯದರ್ಶಿ ನರಸಿಂಹಮೂರ್ತಿ, ವಕೀಲರ ಸಂಘದ ನಿರ್ದೇಶಕರು, ಹಿರಿಯ ವಕೀಲರು ಇದ್ದರು.