ಹನೂರು ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪ್ರತಿನಿಧಿಗಳ ಸಭೆಯಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿದರು. ಮುಕುಂದವರ್ಮ, ಈಶ್ವರ್, ಶಿವಕುಮಾರ್, ಸಿದ್ದರಾಜು ಇತರರಿದ್ದರು.
- ಮಾಜಿ ಶಾಸಕ ಆರ್.ನರೇಂದ್ರ
- ಕಾಂಗ್ರೆಸ್ ಕಚೇರಿ
ಹನೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂದರ್ಭ ಪ್ರತಿಯೊಬ್ಬರೂ ಮುತುರ್ವಜಿ ವಹಿಸುವ ಮೂಲಕ ಬೂತ್ ಮಟ್ಟದಲ್ಲಿ ಎಲ್ಲರೂ ಪಟ್ಟಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಮಾಜಿ ಶಾಸಕ ಆರ್.ನರೇಂದ್ರ ಸಲಹೆ ನೀಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಎಸ್‌ಐಆರ್ ಸಂಬಂಧ ಆಯೋಜಿಸಿದ್ದ ಬೂತ್ ಮಟ್ಟದ ಪಕ್ಷದ ಪ್ರತಿನಿಧಿಗಳ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು. ಯಶಸ್ವಿ ಚುನಾವಣೆಯು ಪರಿಪೂರ್ಣವಾದ ಮತದಾರರ ಪಟ್ಟಿಯ ಮೇಲೆ ನಿಂತಿದೆ. ಹಾಗಾಗಿ ಸರ್ಕಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ನಡೆಸುತ್ತಿದೆ. ಈ ಕಾರ್ಯ ಜೂ.30 ರಿಂದ ಆರಂಭವಾಗಿದ್ದು, ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮತದಾರರು ಅಗತ್ಯ ದಾಖಲೆಯೊಂದಿಗೆ ಸಂಪೂರ್ಣ ವಿವರ ನೀಡಬೇಕಿದೆ ಎಂದರು.
ಅ.5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ದೋಷದಿಂದ ಕೂಡಿದ್ದರೆ ಆಕ್ಷೇಪಣೆಗೆ ಅವಕಾಶವಿದೆ. ಆದ್ದರಿಂದ ಕ್ಷೇತ್ರದ ಮತದಾರರೆಲ್ಲರೂ ಮತದಾರರ ಪಟ್ಟಿಯಲ್ಲಿರುವಂತೆ ನೋಡಿಕೊಳ್ಳಬೇಕು. ಹನೂರು ಕ್ಷೇತ್ರದಲ್ಲಿ ಅದರಲ್ಲೂ ಸೋಲಿಗರ ಪೋಡುಗಳಲ್ಲಿ ಜನರಿಗೆ ಈ ಬಗ್ಗೆ ಸಮರ್ಪಕ ಮಾಹಿತಿ ತಿಳಿದಿರುವುದಿಲ್ಲ. ಹಾಗಾಗಿ ಬಿಎಲ್‌ಒಗಳು ಭೇಟಿ ನೀಡಿದ ವೇಳೆ ಬೂತ್ ಮಟ್ಟದಲ್ಲಿ ನಿಯೋಜನೆಗೊಂಡಿರುವ ಪ್ರತಿನಿಧಿಗಳು ಸ್ಥಳಕ್ಕೆ ತೆರಳಿ ಸಹಕಾರ ನೀಡಬೇಕು. ಉದ್ಯೋಗ ಹರಸಿ ಗ್ರಾಮ ತೊರೆದಿರುವ ಮತದಾರರನ್ನು ಕರೆತಂದು ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ ಮಾಡಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಗೊಂದಲ ಸಂಬಂಧ ಪ್ರತಿನಿಧಿಗಳೊಂದಿಗೆ ಕೆಲಕಾಲ ಚರ್ಚಿಸಲಾಯಿತು. ಸಭೆಯಲ್ಲಿ ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದವರ್ಮ, ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ರಾಚಯ್ಯ, ಜಿಲ್ಲಾ ಉಪಾಧ್ಯಕ್ಷ ಸಿದ್ದರಾಜು, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಾದೇಶ್, ಮುಖಂಡರಾದ ಪುಟ್ಟರಾಜು, ಪಾಳ್ಯ ಕೃಷ್ಣ ಇತರರಿದ್ದರು.