ಹೊಳೆನರಸೀಪುರ ತಾಲೂಕಿನ ದೊಡ್ಡಹಳ್ಳಿ ಸಂತೆ ಮೈದಾನದ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ರಾಸುಗಳನ್ನು ನಿಲ್ಲಿಸಿಕೊಂಡು ರಸ್ತೆ ತಡೆ ಚಳವಳಿ ನಡೆಯಿತು. ಜೆ ಜವರೇಗೌಡ, ಮಧು, ಎಚ್.ಜೆ. ತಮ್ಮನ್‌ಗೌಡ ಪಟೇಲ್, ಡಿ.ಎಸ್. ಚೆಲುವೇಗೌಡ ಪುಟ್ಟರಾಜು ಇದ್ದರು. 
ರಾಜ್ಯ

ಸ್ವಾಧೀನ ಭೂಮಿಗೆ ಮಾರುಕಟ್ಟೆ ದರದಂತೆ ಪರಿಹಾರ ನೀಡಿ

ಹೊಳೆನರಸೀಪುರ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಸ್ವಾಧೀನ ಮಾಡಿಕೊಂಡ ರೈತರ ಭೂಮಿಗೆ ಸರ್ಕಾರದ ಮೌಲ್ಯಕ್ಕೆ ಬದಲಾಗಿ ಮಾರುಕಟ್ಟೆ ದರಕ್ಕೆ ತಕ್ಕಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ವತಿಯಿಂದ ತಾಲೂಕಿನ ದೊಡ್ಡಹಳ್ಳಿ ಸಂತೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರ ಜಾನುವಾರುಗಳನ್ನು ರಸ್ತೆಗೆ ನಿಲ್ಲಿಸಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.
ವೇದಿಕೆ ಅಧ್ಯಕ್ಷ ಜೆ.ಜರೇಗೌಡ ಮಾತನಾಡಿ, ಚಿಕ್ಕಮಗಳೂರು-ಬಿಳಿಕೆರೆ ಮಾರ್ಗ 373ರ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ರೈತರ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳುತ್ತಿದ್ದು, ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರ ಮೌಲ್ಯಕ್ಕೆ ಬದಲಾಗಿ ಮಾರುಕಟ್ಟೆ ಬೆಲೆಯಂತೆ ಹೆಚ್ಚುವರಿಯಾಗಿ ಹಣ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿವೆ. ಭೂಮಿ ಕಳೆದುಕೊಂಡ ರೈತರು ಹಾಗೂ ಅವರ ಕುಟುಂಬ ಬೀದಿ ಪಾಲಾಗುತ್ತಿದ್ದಾರೆ. ಅವರ ರಕ್ಷಣೆಗೆ ಸರ್ಕಾರಗಳು ಮುಂದಾಗಬೇಕು. ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೆ ಪರ್ಯಾಯವಾಗಿ ಭೂಮಿಯನ್ನು ನೀಡಿ, ಹೆಚ್ಚಿನ ಅನುದಾನವನ್ನು ಒದಗಿಸಬೇಕು. ಈ ವಿಷಯವಾಗಿ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಎಂದು ಹೇಳಿದರು.
ದೊಡ್ಡಹಳ್ಳಿ ಸಂತೆ ಮೈದಾನದಲ್ಲಿ ಬೆಳೆದಿದ್ದ ಮರಗಳನ್ನು ಮಾರಣಹೋಮ ಮಾಡಿದ್ದಾರೆ. ಮತ್ತೆ ಮರಗಳನ್ನು ಬೆಳೆಸುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದೇನೆ. ಸರ್ಕಾರಿ ಜಾಗದಲ್ಲಿ ಮರಗಿಡ ಬೆಳಸಲು ಅರಣ್ಯ ಇಲಾಖೆ ಅಧಿಕಾರಿಗಳು ಮೀನ ಮೇಷ ಎಣಿಸುತ್ತಿದ್ದಾರೆ. ಸಾರ್ವಜನಿಕರು ಮನವಿ ಮಾಡಿದ್ದರೂ ಗಿಡ ನೆಡಲು ಮುಂದಾಗದೆ ಇರುವುದು ಅರಣ್ಯ ಇಲಾಖೆಯ ಅಧಿಕಾರಿಗಳ ಲೋಪ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರು.
ಸರ್ಕಾರ ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡಲು ಪ್ರಯತ್ನಿಸುತ್ತಿರುವುದು ಸರಿಯಾದ ಕ್ರಮವಲ್ಲ. ರೈತರಿಗೆ ಅನ್ಯಾಯವಾಗಲಿದೆ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುವುದಿಲ್ಲ. ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ದೊರೆಯುವುದಿಲ್ಲ. ಹೀಗಾಗಿ ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡಬಾರದು. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಎಂ ಮಧು, ವೇದಿಕೆಯ ಕಾನೂನು ಸಲಹೆಗಾರ ವಕೀಲ ಪುಟ್ಟರಾಜು ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಕೆ.ಕೆ. ಶಶಿಕುಮಾರ್ ಜಿಲ್ಲಾಧ್ಯಕ್ಷ ಎಚ್.ಜೆ. ತಮ್ಮನ್‌ಗೌಡ ಪಟೇಲ್ ತಾಲೂಕು ಅಧ್ಯಕ್ಷ ಡಿ.ಎಸ್. ಚೆಲುವೆಗೌಡ, ಹಂಸಪಾಲ, ಮನು, ಅರುಣ್ ಇತರರಿದ್ದರು.ಹಳ್ಳಿ ಮೈಸೂರು ಪೊಲೀಸ್ ಠಾಣೆಯಿಂದ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.