ರಾಯಚೂರಿನ ತಾಪಂ ಕಚೇರಿಯ ಸಭಾಂಗಣದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅಧ್ಯಕ್ಷತೆಯಲ್ಲಿ ಮಂಗಳವಾರ ತ್ರೈ ಮಾಸಿಕ ಕೆಡಿಪಿ ಸಭೆ ನಡೆಯಿತು. ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ತಹಸೀಲ್ದಾರ ಸುರೇಶ ವರ್ಮಾ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪವಾರ, ರಾಯಚೂರು ಒಕ್ಕುಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಂಘದ ಅಧ್ಯಕ್ಷ ಜಯವಂತರಾವ್ ಪತಂಗೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ಪವನ್ ಕಿಶೋರ್ ಪಾಟೀಲ ಇದ್ದರು.
ರಾಯಚೂರು ನದಿ ಪಾತ್ರದ ಗ್ರಾಮಗಳಿಗೆ ಎರಡು ದಿನಗಳಲ್ಲಿ ನದಿ ದಂಡೆಯ ಗ್ರಾಮಗಳಿಗೆ ಶುದ್ದೀಕರಿಸಿದ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಎಚ್ಚರಿಸಿದರು.
ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ತ್ರೈಮಾಸಿಕ ಕೆಡಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನದಿ ಪಾತ್ರದ ಗ್ರಾಮಗಳಳಿಗೆ ಶುದ್ದೀಕರಿಸಿದ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಈ ಹಿಂದೆ ತಿಳಿಸಲಾಗಿತ್ತು. ಆದರೆ ಗಂಜಳ್ಳಿ ಗ್ರಾಮದಲ್ಲಿ ಶುದ್ದೀಕರಿಸಿದ ನೀರು ಸರಬರಾಜು ಮಾಡಲು ಸೂಚಿಸಿದ್ದು, ಸ್ಥಳ ಪರಿಶೀಲನೆಯೂ ಆಗಿದೆ. ಪಿಎಸ್‌ಎಫ್ ಘಟಕಕ್ಕೆ ಸಂಪರ್ಕ ನೀಡುವ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಇದು ಸರಿಯಾದ ಕಾರ್ಯವೈಖರಿಯಲ್ಲ. ಗ್ರಾಮದ ಜನರು ಕೇಳಿದರೇ ಹೇಗೆ ಉತ್ತರಿಸಬೇಕು? ಎರಡು ದಿನಗಳ ಒಳಗಾಗಿ ಗಂಜಳ್ಳಿ ಗ್ರಾಮಕ್ಕೆ ಶುದ್ದೀಕರಿಸಿದ ನೀರು ಸರಬರಾಜು ಮಾಡಲು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಜಲದಾರೆ ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು ಪ್ರಗತಿ ಸಾಧಿಸುತ್ತಿಲ್ಲ. ಒಟ್ಟು 8 ಝಡ್‌ಬಿಟಿ 4 ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, 4 ಕಾಮಗಾರಿಗಳು ಪ್ರಗತಿಯಲ್ಲಿವೆ. 73 ಒಎಚ್‌ಟಿಗಳಲ್ಲಿ 41 ಕಾಮಗಾರಿಗಳು ಪ್ರಗತಿಯಲ್ಲಿದ್ದು, 32 ಬಾಕಿ ಇವೆ. ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕು. ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಜಲಧಾರೆ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಜತೆಗೂಡಿ ಸಭೆ ಮಾಡಬೇಕೆಂದು ತಾಪಂ ಇಓ ಚಂದ್ರಶೇಖರ ಪವಾರ್‌ಗೆ ತಿಳಿಸಿದರು.
ಕಲ್ಮಾಲ ಕೆರೆಯ ವಿದ್ಯುತ್ ಕಾಮಗಾರಿ ಇನ್ನೂ ಪ್ರಗತಿಯಲ್ಲಿದ್ದು, ಜನರಿಗೆ ಕುಡಿಯುವ ನೀರಿನ ಸರಬರಾಜಿಗೆ ಮಾಡಿರುವ ಕಾಮಗಾರಿ ಇದಾಗಿದ್ದು, ಕೆರೆಯ ನೀರು ಸರಬರಾಜು ಆಗದೇ ಇದ್ದಲ್ಲಿ ನೀರು ಕಲುಷಿತವಾಗುತ್ತದೆ.
ಒಂದು ವಾರದೊಳಗೆ ಹುಣಸಿಹಾಳಹುಡಾ,ಕಲ್ಮಾಲ , ಮಾರುಕ್ಯಾಂಪ್, ಸೀತಾನಗರ ಕ್ಯಾಂಪ್ ಸೇರಿ ಕೆರೆ ವ್ಯಾಪ್ತಿಯ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ತಾಲೂಕಿನ ಗ್ರಾಮಗಳ ಎಸ್‌ಸಿ, ಎಸ್‌ಟಿ ಕಾಲೋನಿಗಳಲ್ಲಿರುವ ವಿದ್ಯುತ್ ಸಮಸ್ಯೆಯ ಕುರಿತು ಆಯಾ ಇಲಾಖೆಯ ತಾಲೂಕು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಸಮಸ್ಯೆಗಳನ್ನು ಪಟ್ಟಿ ಮಾಡಿ ಶನಿವಾರದೊಳಗೆ ಜೆಸ್ಕಾಂ ಇಲಾಖೆಗೆ ನೀಡಬೇಕು ನಂತರ ಜೆಸ್ಕಾಂ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪಂಚಾಯತ್ ಸೇರಿ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಕೃಷಿ ಅಧಿಕಾರಿ ದೀಪಾ ಸಭೆಗೆ ಮಾಹಿತಿ ನೀಡಿ, ಮುಂಗಾರು ಹಂಗಾಮಿನಲ್ಲಿ ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಗೆ ತಾಲೂಕಿನಲ್ಲಿ ಬೆಳೆ ಹಾನಿ ಉಂಟಾಗಿದ್ದು, 10672 ಹೆಕ್ಟರ್ ಪ್ರದೇಶದಲ್ಲಿ ಹಾನಿಯಾಗಿದೆ. ಈಗಾಗಲೇ ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆದಿದ್ದು, ಒಟ್ಟು 15422 ಫಲಾನುಭವಿಗಳಲ್ಲಿ 128 ಫಲಾನುಭವಿಗಳಿಗೆ ಮಾತ್ರ ಪರಿಹಾರ ಬಾಕಿ ಉಳಿದಿದೆಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ತಹಸೀಲ್ದಾರ್ ಸುರೇಶ ವರ್ಮಾ, ತಾಪಂ ಇಓ ಚಂದ್ರಶೇಖರ ಪವಾರ, ರಾಯಚೂರು ಒಕ್ಕುಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಂಘದ ಅಧ್ಯಕ್ಷ ಜಯವಂತರಾವ್ ಪತಂಗೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ಪವನ್ ಕಿಶೋರ್ ಪಾಟೀಲ ಸೇರಿದಂತೆ ಅನೇಕರು ಇದ್ದರು.