Provide bus facilities to Singapore
ಹುಳಿಯಾರು: ಹೋಬಳಿಯ ಸಿಂಗಾಪುರ ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತುಮಕೂರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.
ಹುಳಿಯಾರು ಹೋಬಳಿಯ ಸಿಂಗಾಪುರದಲ್ಲಿ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳಿದ್ದು, ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಯಳನಾಡು, ಹುಳಿಯಾರು, ತಿಪಟೂರು ಹಾಗೂ ತುಮಕೂರಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಾರೆ. ಆದರೆ, ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಪ್ರತಿನಿತ್ಯ ಬಸ್ ಹತ್ತಲು ಕನಿಷ್ಠ 3 ಕಿಮೀ ದೂರದ ಯಳನಾಡು ಗ್ರಾಮಕ್ಕೆ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯತೆ ಇದೆ. ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜಯೆಗೆ ಬಡ ಕೂಲಿ ಕಾರ್ಮಿಕರು, ಆಸ್ಪತ್ರೆಗೆ ತೆರಳುವ ರೋಗಿಗಳು ಹಾಗೂ ವಯೋವೃದ್ಧರು ಬಸ್ಸಿನ ಕೊರತೆಯಿಂದ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ ಎಂದು ಗ್ರಾಮಸ್ಥರು ಸಮಸ್ಯೆ ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ಕುರಿತು ಸಾಮಾಜಿಕ ಹೋರಾಟಗಾರ ಸಬ್ಬೇನಹಳ್ಳಿ ಶ್ರೀನಿವಾಸ್ ಹಾಗೂ ವರದಿಗಾರ ಲೋಕೇಶ್ ಹುಳಿಯಾರು ನೇತೃತ್ವದಲ್ಲಿ ಸಿಂಗಾಪುರದ ಮಾರುತಿ -ಆಂಜನೇಯ- ವಿಘ್ನೇಶ್ವರ ಸ್ವಸಹಾಯ ಮಹಿಳಾ ಸಂಘದ ಸದಸ್ಯರಾದ ಚಂದ್ರಮ್ಮ, ಪಾರ್ವತಮ್ಮ, ವಿಜಯಮ್ಮ, ಗಂಗಮ್ಮ ಮತ್ತು ವಿಮಲಾಕ್ಷಿ ಅವರು ಅಧಿಕಾರಿಗಳನ್ನು ಭೇಟಿ ಮಾಡಿ ಗ್ರಾಮದ ವಾಸ್ತವ ಸ್ಥಿತಿಯನ್ನು ವಿವರಿಸಿದರು.
ಮನವಿ ಸ್ವೀಕರಿಸಿದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಈ ಕುರಿತು ಸಂಚಾರ ಶಾಖೆಯ ಅಧಿಕಾರಿ ವೆಂಕಟೇಶ್ ಮಾತನಾಡಿ, ಇಂದೇ ಮಾರ್ಗದ ಸರ್ವೇ ಕಾರ್ಯ ನಡೆಸಿ, ಶಾಲಾ&-ಕಾಲೇಜು ಸಮಯಕ್ಕೆ ಅನುಗುಣವಾಗಿ ಬಸ್ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.