ಕಲಬುರಗಿಯಲ್ಲಿ ಶನಿವಾರ ನಡೆದ ಲಿಂಗಣ್ಣ ಸತ್ಯಂಪೇಟೆ ಸಂಸ್ಮರಣೆಯಲ್ಲಿ ಅಪ್ಪನ ಒಡನಾಟ ಕೃತಿಯನ್ನು ಬಿ.ಆರ್​.ಪಾಟೀಲ್​ ಬಿಡುಗಡೆ ಮಾಡಿದರು. ಶ್ರೀ ಮಹಾಂತ ಸ್ವಾಮೀಜಿ, ಎಸ್​.ಕೆ.ಕಾಂತಾ, ಡಾ.ವಿಲಾಸವತಿ ಖೂಬಾ, ಚನ್ನಾರಡ್ಡಿ ಪಾಟೀಲ್​, ಸಿದ್ಧರಾಮ ಹೊನ್ಕಲ್​, ರವೀಂದ್ರ ಶಾಬಾದಿ, ವಿಶ್ವಾರಾಧ್ಯ ಸತ್ಯಂಪೇಟೆ, ಡಾ.ಶಿವರಂಜನ್​, ಸಂತೋಷ, ಡಾ.ಸುಧಾಕರ ಇತರರಿದ್ದರು. 
ರಾಜ್ಯ

ಉದ್ಯಮಿ ಬದಲು ರೈತರಿಗೆ ಸವಲತ್ತು ಕೊಡಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಕಾಂತಾ ಒತ್ತಾಸೆ
  • ಲಿಂಗಣ್ಣ ಸತ್ಯಂಪೇಟೆ ಸಂಸ್ಮರಣೆಯಲ್ಲಿ ಅಪ್ಪನ ಒಡನಾಟ ಕೃತಿ ಬಿಡುಗಡೆ
ಕಲಬುರಗಿ: ಶಿಕ್ಷಕ, ಪತ್ರಕರ್ತರಾಗಿ ದಿಟ್ಟತನದಿಂದ ರಾಜಕಾರಣಿಗಳ ಅಕ್ರಮ, ರೈತರ ಬವಣೆ ಬಗ್ಗೆ ಬರೆಯುತ್ತಿದ್ದ ದಿ.ಲಿಂಗಣ್ಣ ಸತ್ಯಂಪೇಟೆ ಅವರು ಎಷ್ಟೇ ತೊಂದರೆ ನೀಡಿದರೂ ವಿಚಲಿತರಾಗುತ್ತಿರಲಿಲ್ಲ ಎಂದು ಮಾಜಿ ಸಚಿವ ಎಸ್​.ಕೆ. ಕಾಂತಾ ನೆನಪಿನ ಬುತ್ತಿ ಬಿಚ್ಚಿಟ್ಟರು.
ಶರಣಮಾರ್ಗ ಚಾರಿಟೇಬಲ್​ ಟ್ರಸ್ಟ್​ನಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಲಿಂಗಣ್ಣ ಸತ್ಯಂಪೇಟೆ 14ನೇ ಸಂಸ್ಮರಣೆ, ಬಸವಮಾರ್ಗ ಪ್ರಶಸ್ತಿ ಪ್ರದಾನ ಹಾಗೂ ಅಪ್ಪನ ಒಡನಾಟ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಲಾ ಶಿಕರಾಗಿದ್ದೂ ನಿರ್ಭೀತಿಯಿಂದ ವರದಿ ಬರೆಯುತ್ತಿದ್ದರು. ವೈಚಾರಿಕತೆ ಮತ್ತು ಪ್ರಖರ ಬರವಣಿಗೆಯಿಂದಾಗಿ ಹಲವು ಸಲ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದರು. ಅಮಾನತುಗೊಂಡಿದ್ದಾಗ ಆ ಆದೇಶ ವಾಪಸ್​ ಪಡೆಯುವಂತೆ ಮಾಡಿದ್ದೆ ಎಂದು ಹೇಳಿದರು.
ಶ್ರಮಜೀವಿಗಳು, ರೈತರು ಕಷ್ಟದಲ್ಲಿ, ಗಂಟೆ ಹೊಡೆಯುವವರು, ಮಂತ್ರ ಹೇಳುವವರು ಸುಖವಾಗಿರುತ್ತಾರೆ. ರೈತರಿಗೆ ಸವಲತ್ತು ನೀಡದ ಸರ್ಕಾರ ಸಿಮೆಂಟ್​ ಕಾರ್ಖಾನೆ ಉದ್ಯಮಿಗಳಿಗೆ ಶೇ.70 ಸಬ್ಸಿಡಿ ಸಾಲ ಮಂಜೂರು ಮಾಡುತ್ತದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸುವ ಮೂಲಕ ಬೇಸರ ಹೊರಹಾಕಿದರು.
ಶಾಸಕ ಬಿ.ಆರ್​. ಪಾಟೀಲ್​ ಮಾತನಾಡಿ, ಬಸವತತ್ವ ಅನುಯಾಯಿಯಾಗಿದ್ದ ಲಿಂಗಣ್ಣ ಸತ್ಯಂಪೇಟೆ ಅಣುಬಾಂಬ್​ನಂತಿದ್ದರು. ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದರು. ಈ ಭಾಗದ ರಾಜಕಾರಣಿಗಳು, ಮಠಾಧೀಶರ ಅಕ್ರಮಗಳನ್ನು ನಿರ್ಭಿಡೆಯಿಂದ ಬಯಲುಗೊಳಿಸುತ್ತಿದ್ದರು ಎಂದರು.
ಲಿಂಗಣ್ಣ ಅವರ ಪುತ್ರ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿದರು. ಪತ್ರಕರ್ತ ಡಾ.ಶಿವರಂಜನ್​ ಸತ್ಯಂಪೇಟೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಬಸವ ಸಮಿತಿ ಅಧ್ಯೆಕ್ಷ ವಿಲಾಸವತಿ ಖೂಬಾ, ಸರ್ವ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಚನ್ನಾರಡ್ಡಿ ಪಾಟೀಲ್​, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್​, ವೈಜ್ಞಾನಿಕ ಸಂಶೋಧನ ಪರಿಷತ್​ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಇತರರಿದ್ದರು. ಸುರೇಶ ಬಡಿಗೇರ ನಿರೂಪಣೆ ಮಾಡಿದರು. ವಿಠ್ಠಲ್​ ಚಿಕಣಿ ವಂದಿಸಿದರು.
ಬೆಂಗಳೂರಿನ ಸಿಸಿಬಿ ಪೊಲೀಸ್​ ಅಧಿಕಾರಿ ಡಾ.ಬಿ.ಎಸ್​. ಸುಧಾಕರ ಅವರಿಗೆ ಬಸವ ಮಾರ್ಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂತೋಷ ಸತ್ಯಂಪೇಟೆ ಬರೆದ ಅಪ್ಪನ ಒಡನಾಟ ಕೃತಿಯನ್ನು ಶಾಸಕ ಬಿ.ಆರ್​. ಪಾಟೀಲ್​ ಬಿಡುಗಡೆಗೊಳಿಸಿದರು. ಅಶೋಕ ದೊಡ್ಡಮನಿ ಕೃತಿ ಪರಿಚಯಿಸಿದರು. ಸಿದ್ಧಾರ್ಥ ಚಿಮ್ಮಾಇದಲಾಯಿ ವಚನ ಸಂಗೀತ ನಡೆಸಿಕೊಟ್ಟರು.
ನಿಜವಾದ ಶರಣ ಲಿಂಗಣ್ಣ
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಮುದಗಲ್​ ಕಲ್ಯಾಣಾಶ್ರಮದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಲಿಂಗಣ್ಣ ಅವರು ಇಳಕಲ್​ ಮಹಾಂತ ಅಪ್ಪಗಳ ಅನುಯಾಯಿ ಆಗಿದ್ದರು. ಹಲವು ಬಾರಿ ಇಳಕಲ್​ಗೆ ಬಂದಾಗ ಅವರೊಂದಿಗೆ ನಾನಿರುತ್ತಿದ್ದೆ. ಇಳಕಲ್​ ಶ್ರೀಗಳು ಸತ್ಯಂಪೇಟೆವರೆಗೆ ಎರಡು ಸಲ ಪಾದಯಾತ್ರೆ ಮಾಡಿದಾಗ ದಾರಿಯಲ್ಲಿ ಶರಣತತ್ವದ ಬಗ್ಗೆ ಲಿಂಗಣ್ಣ ಪ್ರಚಾರ ಮಾಡಿದ್ದರು. ಸಿಂಧನೂರು ಕಡೆ ಲಿಂಗಣ್ಣ ಬಂದಾಗ ಬಸ್​ ಹತ್ತಿ ಆ ಊರಿಗೆ ಹೋಗಿ ಜನರನ್ನು ಭೇಟಿ ಮಾಡುತ್ತಿದ್ದೆವು. ಬೈಕ್​ನಲ್ಲಿಯೂ ಹಲವು ಗ್ರಾಮಗಳಿಗೆ ಸಂಚರಿಸಿದ್ದೇವೆ. ಲಿಂಗಣ್ಣ ನಿಜವಾದ ಶರಣ ಎಂದು ಬಣ್ಣಿಸಿದರು.