ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಿ.ಶಂಕರ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ತಹಸೀಲ್ದಾರ್ ಜೆ.ಮಂಜುನಾಥ್, ಇಒ ಕೆ.ಹೊಂಗಯ್ಯ, ಕೆ.ಲಕ್ಷ್ಮಣ್ ಇತರರಿದ್ದರು.
- ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಸಿ.ಶೇಖರ್ ಅಂಕನಶೆಟ್ಟಿಪುರ
- ಅಂಬೇಡ್ಕರ್ ಭವನ
ಹುಣಸೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಸಫಾಯಿ ಕರ್ಮಚಾರಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಹೊಣೆ ಆಯಾ ಗ್ರಾ.ಪಂ.ನದ್ದಾಗಿದ್ದು, ಬೇಜವಾಬ್ದಾರಿ ಸಹಿಸುವುದಿಲ್ಲ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಸಿ.ಶೇಖರ್ ಅಂಕನಶೆಟ್ಟಿಪುರ ಎಚ್ಚರಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರೊಂದಿಗೆ ನೇರ ಸಂವಾದದಲ್ಲಿ ಪೌರಕಾರ್ಮಿಕರ ಕುಂದುಕೊರತೆ ಆಲಿಸಿ ಮಾತನಾಡಿದರು. ತಾಲೂಕಿನ 41 ಗ್ರಾಪಂಗಳ ಪೈಕಿ 10ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ಪೌರಕಾರ್ಮಿಕರೇ ಇಲ್ಲ. ಪಿಡಿಒಗಳು 15 ದಿನಗಳಿಗೊಮ್ಮೆ ಹೊರಗಿನಿಂದ ಒಬ್ಬರನ್ನು ಕರೆಯಿಸಿ ಕೆಲಸ ಮಾಡಿಸುತ್ತಿರುವುದು ಸರಿಯೇ?. ನಿಮಗೆ ಹೊರಗುತ್ತಿಗೆ ಆಧಾರದಡಿ ನೇಮಿಸಿಕೊಳ್ಳಲು ಅವಕಾಶವಿದೆ. ಯಾಕೆ ಮಾಡುತ್ತಿಲ್ಲ? ಪೌರಕಾರ್ಮಿಕರು ಇರುವ ಕಡೆಗಳಲ್ಲಿ ಮೂಲಸೌಕರ್ಯಗಳಿಲ್ಲ. ಮನೆ, ನಿವೇಶನ ಇಲ್ಲದೇ ಬದುಕು ನಡೆಸುತ್ತಿದ್ದಾರೆ. ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮತ್ತು ವರ್ಷಕ್ಕೊಮ್ಮೆ ಮಾಸ್ಟರ್ ತಪಾಸಣೆ ಆಗಬೇಕು. ಸಫಾಯಿ ಕರ್ಮಚಾರಿಗಳು ಆರೋಗ್ಯವಂತರಾಗಿದ್ದರೆ ಗ್ರಾಮವೂ ಆರೋಗ್ಯವಾಗಿರುತ್ತದೆ ಎನ್ನುವುದನ್ನು ತಿಳಿಯಿರಿ. ಮಾಸ್ಟರ್ ತಪಾಸಣೆ ಯಾಕೆ ಮಾಡಿಸುತ್ತಿಲ್ಲವೆಂದು ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು.
ಮನೆ ನೆಲಸಮ, ಸೂರಿಲ್ಲ: ಗಾವಡಗೆರೆ ಪಂಚಾಯಿತಿಯ ಸಫಾಯಿ ಕರ್ಮಚಾರಿ ಆರ‌್ಮುಗಂ ಮಾತನಾಡಿ, ಗಾವಡಗೆರೆ ಗ್ರಾ.ಪಂ.ಕೇಂದ್ರಸ್ಥಾನದಲ್ಲೇ ಇದ್ದ ನನ್ನ ಮನೆಯನ್ನು ಖಾಸಗಿಯವರು ನೆಲಸಮ ಮಾಡಿದ್ದಾರೆ. ಈವರೆಗೆ ನನಗೆ ಮನೆ ನೀಡಿಲ್ಲ. ಪಕ್ಕದ ಕೆ.ಆರ್.ನಗರ ತಾಲೂಕಿನಿಂದ ಬೆಳಗಿನ ಜಾವ 3ಗಂಟೆಗೆ ಕೆಲಸಕ್ಕೆ ಬರುತ್ತಿದ್ದೇನೆ, ವಯಸ್ಸಾಗಿದೆ. ಮನೆಯೊಂದನ್ನು ಕೊಡಿಸಿಕೊಡಿ ಎಂದು ಕೋರಿದರು. ಮನೆ ನೆಲಸಮವಾಗಿದ್ದು ಏಕೆ ಎಂದು ಆಯೋಗದ ಸದಸ್ಯ ಶಂಕರ್ ತಹಸೀಲ್ದಾರ್‌ರನ್ನು ಕೇಳಿದಾಗ, ಇನಾಂ ಜಮೀನಿನಲ್ಲಿ ಇವರ ಮನೆ ಇತ್ತು. ಕಳೆದ ಕೆಲವು ವರ್ಷಗಳಿಂದ ಆರ‌್ಮುಗಂ ಕುಟುಂಬ ಅಲ್ಲಿ ವಾಸವಿರಲಿಲ್ಲ. ಇದ್ದಕ್ಕಿದ್ದಂತೆ ಇನಾಂಗೆ ನೀಡಿದ ಕುಟುಂಬದವರು ಮನೆ ನೆಲಸಮ ಮಾಡಿದ್ದಾರೆ. ಈ ಕುರಿತು ಅವರಿಗೆ ಎಚ್ಚರಿಕೆ ನೀಡಿ ಪರ್ಯಾಯ ನಿವೇಶನ ನೀಡಲು ಸೂಚಿಸಿದ್ದೇವೆ. ಒಂದೂವರೆ ಗುಂಟೆ ಭೂಮಿ ನೀಡಲು ಒಪ್ಪಿದ್ದಾರೆ. ಶೀಘ್ರ ಆರ‌್ಮುಗಂ ಹೆಸರಿಗೆ ಮಾಡಿಸಿಕೊಡಲಾಗುವುದು ಎಂದರು.
ಕೇಂದ್ರಸ್ಥಾನದಲ್ಲೇ ಮನೆ ಕೊಡಿ: ಗ್ರಾ.ಪಂ.ಕೇಂದ್ರಸ್ಥಾನದಲ್ಲೇ ಸಫಾಯಿ ಕರ್ಮಚಾರಿಗಳಿಗೆ ಮನೆ ಮತ್ತು ಮೂಲಸೌಕರ್ಯ ಕಲ್ಪಿಸಿಕೊಡಿ. 7-8 ಗ್ರಾಮಗಳ ಸ್ವಚ್ಛತೆ ಮಾಡುವ ಕಾರ್ಮಿಕರು ನಿಮ್ಮೂರಿಗೆ 6-7ಕಿ.ಮೀ.ದೂರಿದಿಂದ ಬರುವಂತೆ ಮಾಡಬೇಡಿ. ಅವರ ಮಕ್ಕಳ ಶಿಕ್ಷಣಕ್ಕೆ ಅಗತ್ಯ ಸವಲತ್ತುಗಳನ್ನು ನೀ ರಿ ಎಂದು ಪಿಡಿಒಗಳಿಗೆ ಸೂಚಿಸಿದರಲ್ಲದೆ, ಸಭೆಗೆ ಪೌರಕಾರ್ಮಿಕರನ್ನು ಕರೆತರದ ಪಿಡಿಒಗಳಿಗೆ ಕಾರಣಕೇಳಿ ನೋಟಿಸ್ ಜಾರಿಗೊಳಿಸಿ ಎಂದು ಇಒ ಕೆ.ಹೊಂಗಯ್ಯ ಅವರಿಗೆ ಸೂಚಿಸಿದರು. ಅಲ್ಲದೆ ಸಭೆಗೆ ಬಾರದ ಪಿಡಿಒಗಳಿಗೂ ನೋಟೀಸ್ ನೀಡಿರಿ ಎಂದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಭರತ್‌ಕುಮಾರ್, ಉಪವಿಭಾಗ ಮಟ್ಟದ ಸಫಾಯಿ ಕರ್ಮಚಾರಿಗಳ ಸಮಿತಿ ಸದಸ್ಯ ಕೆ.ಲಕ್ಷ್ಮಣ್ ಸೇರಿದಂತೆ ಪಿಡಿಒಗಳು ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು.