ಕೆಜಿಎಫ್ ಆಸ್ಪತ್ರೆಗೆ ಸೂಕ್ತ ಪರಿಕರ ಒದಗಿಸಿ hospital
- ವಿ.ಮೋಹನ್ ಕೃಷ್ಣ ಒತ್ತಾಯ
- ಅತ್ಯಾಧುನಿಕ ಸೌಲಭ್ಯ ಒದಗಿಸಲು ಪ್ರತಿಭಟನೆ
ಕೆಜಿಎಫ್: ನಗರದ ಸಾರ್ವಜನಿಕ ಆಸ್ಪತ್ರೆಗೆ 1970ರ ದಶಕದಲ್ಲಿಯೇ ಜಿಲ್ಲಾಸ್ಪತ್ರೆ ಸ್ಥಾನಮಾನ ನೀಡಿ ಸರ್ಕಾರ ಆದೇಶ ಹೊರಡಿಸಿದ್ದು, ಇದ್ದಕ್ಕಿದ್ದಂತೆ ಆಸ್ಪತ್ರೆಯನ್ನು ಈಗ ತಾಲೂಕು ಸ್ಥಾನಮಾನಕ್ಕೆ ಇಳಿಸುವುದಕ್ಕೆ ನಾವು ಬಿಡುವುದಿಲ್ಲ. ಆಸ್ಪತ್ರೆಯಲ್ಲಿ ಕೊರತೆಯಿರುವ ದಾದಿಯರು, ಲ್ಯಾಬ್ ಟೆಕ್ನಿಷಿಯನ್ ಮತ್ತು ಖಾಲಿಯಿರುವ 52 ಡಿ ಗ್ರೂಪ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕೆಂದು ಆರ್ಕೆ ಫೌಂಡೇಷನ್ ಅಧ್ಯಕ್ಷ ವಿ.ಮೋಹನ್ ಕೃಷ್ಣ ಒತ್ತಾಯಿಸಿದರು. hospital
ನಗರದ ಗಾಂಧಿ ವೃತ್ತದಿಂದ ಸಾರ್ವಜನಿಕ ಆಸ್ಪತ್ರೆಯವರೆಗೆ ಜಾಥಾ ಹೊರಟು ಆಸ್ಪತ್ರೆ ಮುಂಭಾಗ ನೂರಾರು ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿ, ಆಸ್ಪತ್ರೆಯಲ್ಲಿ ಹಲವು ಹುದ್ದೆ ಖಾಲಿ ಇದ್ದು, ಕೂಡಲೇ ಭರ್ತಿ ಮಾಡಬೇಕು. ವೈದ್ಯರಿಗೆ ಅತ್ಯಾಧುನಿಕ ಸಲಕರಣೆ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಕೆಜಿಎಫ್ನಲ್ಲಿ ದಿನೇದಿನೆ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವು&ನೋವುಗಳು ಹೆಚ್ಚಾಗುತ್ತಿದ್ದು, ಹೃದಯ ಸಂಬಂಧಿ ತಜ್ಞ ವೈದ್ಯರನ್ನು ನೇಮಕ ಮಾಡಬೇಕು. ಆಸ್ಪತ್ರೆಗೆ ಹೆಚ್ಚಿನ ಆಂಬುಲೆನ್ಸ್ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿದರು.
ನ.7ರಂದು ತಾಲೂಕಿನ ಗುಟ್ಟಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶು ಮರಣಕ್ಕೆ ಕಾರಣರಾದ ವೈದ್ಯೆ ಡಾ.ನಾಗಮಣಿ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಸಾವಿಗೀಡಾದ ಮಗುವಿನ ಪಾಲಕರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಕೆಜಿಎಫ್ ತಾಲೂಕಿನ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕೆಂದು ಪ್ರತಿಭಟನಕಾರರು ಆಸ್ಪತ್ರೆಯ ಮುಂಭಾಗ ಅಣುಕು ಶವ ಇಟ್ಟು ಪ್ರತಿಭಟನೆ ನಡೆಸಿದರು.
ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸಬಾರದು ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ಸಹ ಗುಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ನಾಗಮಣಿ ಖಾಸಗಿ ಕ್ಲಿನಿಕ್ ನಡೆಸುವ ಧಾವಂತದಲ್ಲಿ ಅಮಾಯಕ ನವಜಾತ ಶಿಶುವಿನ ಸಾವಿಗೆ ಕಾರಣರಾಗಿದ್ದಾರೆ ಎಂದರು.
ಕೆಜಿಎಫ್ ಸಾರ್ವಜನಿಕ ಆಸ್ಪತ್ರೆ ಸಾವಿನ ಮನೆಯಾಗಿದೆ. ಆಸ್ಪತ್ರೆ ಇರುವುದು ರೋಗಿಗಳ ಮರಣೋತ್ತರ ಪರೀೆಗಲ್ಲ. ಸಾವಿನ ದವಡೆಯಿಂದ ರೋಗಿಗಳನ್ನು ರಕ್ಷಿಸುವುದಕ್ಕೆ. ಆದರೆ ಇಲ್ಲಿನ ವೈದ್ಯರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ, ಅವರ ಪ್ರಾಣ ಉಳಿಸುವುದರಲ್ಲಿ ಸಂಪೂರ್ಣ ವಿಫಲವಾಗಿದ್ದು, ಇದರ ಹೊಣೆ ನೇರವಾಗಿ ಶಾಸಕರು ಹೊರಬೇಕಿದೆ ಎಂದರು.
ಓಬಿರಾಯನ ಕಾಲದ ಶಸ್ತ್ರ ಚಿಕಿತ್ಸೆಯ ಪರಿಕರಗಳನ್ನು ಇಟ್ಟುಕೊಂಡು ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವೇ? ಕಣ್ಣು, ಮೂಳೆ, ಹಲ್ಲುಗಳ ಶಸ್ತ್ರ ಚಿಕಿತ್ಸೆ ಮಾಡಲು ಆಸ್ಪತ್ರೆಯಲ್ಲಿ ಅತ್ಯಾಧುನಿಕ ಪರಿಕರಗಳ ಕೊರತೆ ಎದ್ದು ಕಾಣುತ್ತಿದೆ. ನಾಯಿ ಕಡಿತ, ಹಾವು ಕಡಿತ ಮೊದಲಾದ ರೋಗಗಳಿಗೆ ಅಗತ್ಯವಿರುವ ಔಷಧ ಕೊರತೆ ಸೇರಿ ಸಾಲು ಸಾಲು ಸಮಸ್ಯೆ ಇದೆ.
ಕಾಲು ಮುರಿದ ರೋಗಿಯನ್ನು ಹೊರ ಕಳಿಸಿದರು!:ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಲು ಮುರಿದುಕೊಂಡು ಬಂದ ರೋಗಿಯೊಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ವಾಪಸ್ ಕಳುಹಿಸಿದಾಗ ವೈದ್ಯರ ವಿರುದ್ಧ ಪ್ರತಿಭಟನೆಕಾರರು ಕೆರಳಿ ಕೆಂಡವಾದರು. ಬಡವರು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಚಿಕಿತ್ಸೆಗೆಂದು ಬಂದ ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡದೇ ಬೇರೆ ಆಸ್ಪತ್ರೆಗೆ ಶಿಫಾರಸು ಮಾಡಿ ಕಳುಹಿಸಿದರೆ ಅವರು ಹೋಗುವುದಾದರೂ ಎಲ್ಲಿಗೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.