ಮಳಖೇಡನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಡಿಸಿ ಇಕ್ರಮ್​ ಶರೀಫ್​ ಮಂಗಳವಾರ ಭೇಟಿ ನೀಡಿ ರೋಗಿಗಳ ಅಳಲು ಆಲಿಸಿದರು. ಐಎಎಸ್​ ಅಧಿಕಾರಿ ಶಶಿರ್​ ಮೊಘಾ, ತಹಸೀಲ್ದಾರ್​ ಶ್ರೀಯಾಂಕ ಧನಶ್ರೀ, ಟಿಎಚ್​ಒ ಡಾ.ಸಂಜೀವಕುಮಾರ ಪಾಟೀಲ್​ ಇತರರಿದ್ದರು. 
ರಾಜ್ಯ

ರೋಗಿಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಿ

ಪ್ರಮುಖ ಮುಖ್ಯಾಂಶಗಳು

  • ಮಳಖೇಡ ಸಿಎಚ್​ಸಿ ವ್ಯವಸ್ಥೆ ಪರಿಶೀಲಿಸಿದ ಡಿಸಿ
ಮಳಖೇಡ: ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆ ಆಗದಂತೆ ವೈದ್ಯರು ಮತ್ತು ಸಿಬ್ಬಂದಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಸೂಚಿಸಿದರು.
ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಶಸ್ತ್ರ ಚಿಕಿತ್ಸಾ ವಿಭಾಗ, ಔಷಧಿ ದಾಸ್ತಾನು ಕೋಣೆ, ಹೆರಿಗೆ ವಿಭಾಗ, ಪ್ರಯೋಗಾಲಯ, ಶೌಚಗೃಹ, ಆಶಾಕಿರಣ ದೃಷ್ಟಿಕೇಂದ್ರ, ದಂತಚಿಕಿತ್ಸಾ ವಿಭಾಗಗಳನ್ನು ಪರಿಶೀಲಿಸಿದ ಬಳಿಕ ರೋಗಿಗಳ ಕುಂದುಕೊರತೆ ಆಲಿಸಿ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕೋಣೆಗಳನ್ನು ಬಳಸದಿರುವುದಕ್ಕೆ ಸಿಡಿಮಿಡಿಗೊಂಡರು.
ಕರ್ತವ್ಯಲೋಪ ಎಸಗಿದ ಆಶಾಕಿರಣ ದೃಷ್ಟಿಕೇಂದ್ರದ ನೇತ್ರಾಧಿಕಾರಿ ಪರಮೇಶ್ವರಗೆ ನೋಟಿಸ್​ ಜಾರಿ ಮಾಡುವಂತೆ ಟಿಎಚ್​ಒ ಡಾ.ಸಂಜೀವಕುಮಾರ ಪಾಟೀಲ್​ ಅವರಿಗೆ ಸೂಚಿಸಿದರು. ರಕ್ತ ಪರೀಕ್ಷೆಗೆ ಹಣ ಕೇಳುವ ಆರೋಪ ಹೊತ್ತಿರುವ ಲ್ಯಾಬ್​ ಟೆಕ್ನಿಷಿಯನ್​ ಅತ್ತಾರ್​ ಪಾಶಾಗೆ ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಡಿಸಿ ಇಕ್ರಮ್​ ಶರೀಫ್​, ಇಲ್ಲಿನ ಸುವ್ಯವಸ್ಥೆ ಮತ್ತು ಅವ್ಯವಸ್ಥೆ ಎರಡನ್ನೂ ಕೂಲಂಕಷ ಪರಿಶೀಲಿಸಿದ್ದೇನೆ. ಆಸ್ಪತ್ರೆಗೆ ಕಂಪೌಂಡ್​ ವಾಲ್​ ಸೇರಿ ಹೆಚ್ಚಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ರಾತ್ರಿ ವೇಳೆ ವೈದ್ಯರು ಮತ್ತು ಸಿಬ್ಬಂದಿ ಇರಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಪ್ರೊಬೆಷನರಿ ಐಎಎಸ್​ ಅಧಿಕಾರಿ ಶಶಿರ್​ ಮೊಘಾ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್​ ಶ್ರೀಯಾಂಕ ಧನಶ್ರೀ, ಡಾ.ನವೀನ್​, ಪಿಡಿಒ ಸಂದೀಪ ಗುತ್ತೇದಾರ್​, ವಿಎ ಚಂದ್ರಕಾಂತ ಭಾವೆ, ಪ್ರಮುಖರಾದ ಶ್ರೀನಿವಾಸ ಸಂಗಾವಿ, ಚಿತ್ರಶೇಖರ ಕುಂಬಾರ, ಶಿವರಾಜ ವಿಶ್ವಕರ್ಮ, ದೊಡ್ಡಪ್ಪ ಭೈಯಾರ್​, ತೌಸಿಫ್​ ಖಾನ್​, ಪ್ರಶಾಂತ ದೊಡ್ಮನಿ, ಕೀರ್ತಿಕುಮಾರ ಮಾಳಗಿ, ಭಗವಾನ ಬೋಚಿನ್​, ಶ್ರೀಶೈಲ ಪೂಜಾರಿ, ರಾಜಪ್ಪ ಮಂಗಾ, ಸಂತೋಷ ಪೂಜಾರಿ ಇತರರಿದ್ದರು.
ವಿವಿಧ ಬೇಡಿಕೆ ಈಡೇರಿಸಲು ಮನವಿ
ಸ್ಥಳಿಯರಿಗೆ ಉದ್ಯೋಗ ನೀಡದೆ ವಂಚಿಸುತ್ತಿರುವ ಅಲ್ಟ್ರಾಟೆಕ್​ ಸಿಮೆಂಟ್​ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಗ್ರಾಮಕ್ಕೆ ಅಗತ್ಯ ಮೂಲಸೌಕರ್ಯ ಜತೆ ಪರಿಶಿಷ್ಟರಿಗೆ ಪ್ರತ್ಯೇಕ ರುದ್ರಭೂಮಿ ಮಂಜೂರು ಮಾಡಬೇಕು. ಹದಗೆಟ್ಟ ರಸ್ತೆ, ಬೀದಿ ದೀಪ, ರಾಜ್ಯ ಹೆದ್ದಾರಿಯಲ್ಲಿ ಅಸ್ತವ್ಯಸ್ತ ವಾಹನ ನಿಲುಗಡೆ, ಹೊಸ ಕಾಗಿಣಾ ಸೇತುವೆ ಮೇಲೆ ಬೆಳಕಿನ ವ್ಯವಸ್ಥೆ, ಐತಿಹಾಸಿಕ ಕೋಟೆಯಲ್ಲಿ ನಡೆಯುವ ಅನೈತಿಕ ಚಟುವಟಿಕೆ ತಡೆಗಟ್ಟಿ ಕೋಟೆ ಅಭಿವೃದ್ಧಿಪಡಿಸಬೇಕು ಎಂದು ಮಳಖೇಡ ಗ್ರಾಮಸ್ಥರು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಡಿಸಿ ಸೂಚನೆ ಮೇರೆಗೆ ಕೇಂದ್ರದ ಶೌಚಗೃಹ ಬೀಗ ತೆಗೆಯಲು ಸಿಬ್ಬಂದಿ ಕ್ಷಣಕಾಲ ಪರದಾಡಿದ್ದು ಕಂಡಿತು.