Provide adequate electricity.
ಎಂ.ಎನ್.ಕೋಟೆ: ಗುಬ್ಬಿ ತಾಲೂಕಿನ ಬಂಡನಹಳ್ಳಿ, ಭೋವಿಕಾನಿ ಭೋಗಸಂದ್ರ, ಹರದಗೆರೆ, ಕಳನಹಳ್ಳಿ ಮುದ್ದನಹಳ್ಳಿಹಟ್ಟಿ, ಕರಡಿಕಲ್ಲು ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ ಎಂದು ರೈತರು ಸೋಮವಾರ ಹೊಸಕೆರೆ ಬೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಗ್ರಾಪಂ ಸದಸ್ಯ ಶಿವರಾಜು ಮಾತನಾಡಿ, ಜಮೀನಿನ ಕೆಲಸಗಳಿಗೆ ಸಮರ್ಪಕ ವಿದ್ಯುತ್‌ನ ಅವಶ್ಯಕತೆ ಇದ್ದು, ವಿದ್ಯುತ್ ಕೊರತೆಯಿಂದ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಸರಿಯಾಗಿ ವಿದ್ಯುತ್ ಕೊಡದೆ ಬೆಸ್ಕಾಂ ಅಧಿಕಾರಿಗಳು ಜನರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಕಳೆದ 5 ವರ್ಷಗಳಿಂದಲೂ ಈ ಸಮಸ್ಯೆ ಬೆಸ್ಕಾಂ ಅಧಿಕಾರಿಗಳು ಪರಿಹಾರ ಕಂಡುಕೊಳ್ಳುತ್ತಿಲ್ಲ. ಶಾಲೆಗಳಲ್ಲಿ ವಾರ್ಷಿಕ ಪರೀಕ್ಷೆ ಆರಂಭವಾಗಲಿದ್ದು ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ತೊಂದರೆಯಾಗಲಿದೆ ಎಂದರು.
ಎಇಇ ರಾಜೇಶ್ ಮಾತನಾಡಿ, ಸಮಸ್ಯೆಗಳ ಬಗ್ಗೆ ಗಮನಹರಿಸಲಾಗುವುದು, ಈಗಾಗಲೇ ಬಂಡಹಳ್ಳಿ ಹರದಗೆರೆ , ಬೋವಿಕಾಲನಿ, ಭೋಗಸಂದ್ರ ಗ್ರಾಮಗಳಲ್ಲಿ ಲಿಂಕ್ ಲೈನ್ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದು ವಾರದಲ್ಲಿ ಈ ಭಾಗದ ರೈತರ ವಿದ್ಯುತ್ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಬೆಸ್ಕಾಂ ಶಾಖಾಧಿಕಾರಿ ಧನಂಜಯ್, ಗ್ರಾಪಂ ಸದಸ್ಯ ಮಹಾರುದ್ರಸ್ವಾಮಿ ಇದ್ದರು.