ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ನೇತೃತ್ವದ ಕಲ್ಯಾಣ ಕರ್ನಾಟಕ ಸಂಸದರ ನಿಯೋಗ ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿ ಕಲ್ಯಾಣದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿಪತ್ರ ಸಲ್ಲಿಸಿತು. ಜಿ.ಕುಮಾರ ನಾಯಕ್, ಇ.ತುಕಾರಾಂ, ರಾಜಶೇಖರ ಹಿಟ್ನಾಳ್, ಪ್ರಭಾ ಮಲ್ಲಿಕಾರ್ಜುನ ಇದ್ದರು.
- ಕಕ ಸಂಸದರ ನಿಯೋಗ ಮನವಿ
- ದೆಹಲಿಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಭೇಟಿ
ಕಲಬುರಗಿ: ಸಂಸದ ರಾಧಾಕೃಷ್ಣ ದೊಡ್ಡಮನಿ ನೇತೃತ್ವದ ಕಲ್ಯಾಣ ಕರ್ನಾಟಕ ಸಂಸದರ ನಿಯೋಗ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿ ಅಲ್ಪಸಂಖ್ಯಾತರು ಹೆಚ್ಚಿರುವ ಕಡೆ ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮದಡಿ ಪ್ರಮುಖ ಅಭಿವೃದ್ಧಿ ಯೋಜನೆ ಮಂಜೂರು ಮಾಡುವಂತೆ ಆಗ್ರಹಿಸಿತು.
ಈ ಭಾಗದ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಜೀವನೋಪಾಯ ಮತ್ತು ಕೌಶಲಾಭಿವೃದ್ಧಿ ಕ್ಷೇತ್ರಗಳ ಕುರಿತು ಬೆಳಕು ಚೆಲ್ಲಿದ ನಿಯೋಗ, ಕಕ ಐತಿಹಾಸಿಕವಾಗಿ ಹಿಂದುಳಿದ ಪ್ರದೇಶ. ಸಂವಿಧಾನದ 371(ಜೆ) ವಿಧಿ ಅಡಿ ವಿಶೇಷ ಸ್ಥಾನಮಾನ ಹೊಂದಿದೆ. ಇಲ್ಲಿ ವಿಶೇಷ ಅಭಿವೃದ್ಧಿ ಉಪಕ್ರಮಗಳ ಅಗತ್ಯವಿದೆ ಎಂದು ಒತ್ತಿ ಹೇಳಿತು.
ಪ್ರಸ್ತಾವಿತ ಯೋಜನೆಗಳಲ್ಲಿ ಶಾಲಾ ಕಟ್ಟಡ, ಹೆಚ್ಚುವರಿ ತರಗತಿ ಕೊಠಡಿ, ವಸತಿನಿಲಯ, ಐಟಿಐ, ಪಾಲಿಟೆಕ್ನಿಕ್ ಮತ್ತು ಕೌಶಲಾಭಿವೃದ್ಧಿ ಕೇಂದ್ರ, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಯಿ-ಮಕ್ಕಳ ಆರೋಗ್ಯ, ಕುಡಿಯುವ ನೀರು, ರಸ್ತೆ, ನೈರ್ಮಲ್ಯ, ಸಮುದಾಯ ಭವನ ಮತ್ತು ಅಂಗನವಾಡಿ ಕೇಂದ್ರ, ವೃತ್ತಿಪರ ತರಬೇತಿ, ಉದ್ಯಮಶೀಲತೆ ಮತ್ತು ಮಹಿಳೆಯರು ಹಾಗೂ ಯುವಕರಿಗಾಗಿ ಕೌಶಲಾಭಿವೃದ್ಧಿ ಕಾರ್ಯಕ್ರಮ ಸೇರಿವೆ. ಪರಿಶೀಲಿಸಿ ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮದಡಿ ಆರ್ಥಿಕ ನೆರವು ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಚಿವರಲ್ಲಿ ಮನವಿ ಮಾಡಿತು.
ನಿಯೋಗದಲ್ಲಿ ರಾಯಚೂರು ಸಂಸದ ಜಿ.ಕುಮಾರ ನಾಯಕ್, ಬಳ್ಳಾರಿ ಸಂಸದ ಇ.ತುಕಾರಾಂ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಹಾಗೂ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಇದ್ದರು.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿರುವ ಬ್ಲಾಕ್ ಮತ್ತು ನಗರ ಸ್ಥಳಿಯ ಸಂಸ್ಥೆಗಳಿಗೆ ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮದಡಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ.
— > ರಾಧಾಕೃಷ್ಣ ದೊಡ್ಡಮನಿ ಕಲಬುರಗಿ ಸಂಸದ