ಬನಹಟ್ಟಿಯಲ್ಲಿ ಮಂಗಳವಾರ ಹೋರಾಟಗಾರರು ಸಂಭ್ರಮಿಸಿದ ಕ್ಷಣ. ಶಂಕರ ಸೊರಗಾಂವಿ, ಮಲ್ಲು ತುಂಗಳ, ರಾಜು ಭದ್ರನ್ನವರ ಇತರರಿದ್ದರು. 
ರಾಜ್ಯ

ಉಪವಾಸ ಸತ್ಯಾಗ್ರಹ ಕೈಬಿಟ್ಟ ಪ್ರತಿಭಟನಾಕಾರರು

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಎಸಿ ಶ್ವೇತಾ ಬೀಡಿಕರ ಭರವಸೆ
  • ಪ್ರಜಾಸೌಧಕ್ಕಾಗಿ ಬನಹಟ್ಟಿಯಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ತೆರೆ
ರಬಕವಿ-ಬನಹಟ್ಟಿ: ಪ್ರಜಾಸೌಧಕ್ಕೆ ನಿರ್ಮಾಣಕ್ಕಾಗಿ ಆಗ್ರಹಿಸಿ ಕಳೆದ 38 ದಿನಗಳಿಂದ ಬನಹಟ್ಟಿಯಲ್ಲಿ ನಡೆಯುತ್ತಿದ್ದ ಹೋರಾಟವು ಅಂತಿಮ ಘಟ್ಟ ತಲುಪಿದ್ದು, ಮಂಗಳವಾರ ಅಧಿಕಾರಿಗಳ ಭರವಸೆ ಬಳಿಕ ತೆರೆ ಬಿದ್ದಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಜಮಖಂಡಿ ಎಸಿ ಶ್ವೇತಾ ಬೀಡಿಕರ ಮಾತನಾಡಿ, ಬನಹಟ್ಟಿಯಲ್ಲಿ ಪ್ರಜಾಸೌಧ ನಿರ್ಮಿಸಲು ಗುರುತಿಸಲಾಗಿರುವ ಸಿಟಿಎಸ್ 8022 ದಾಖಲೆಗಳನ್ನು ಸಂಗಹಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ಕಾರದ ನಿರ್ಧಾರದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಿದ ಬಳಿಕ ಹೋರಾಟವನ್ನು ಕೈ ಬಿಡಲಾಯಿತು.
ನಂತರ ಉಪವಾಸ ಸತ್ಯಾಗ್ರಹ ನಿರತರಾಗಿದ್ದ ಶಂಕರ ಸೊರಗಾಂವಿ, ಮಾಳು ಹಿಪ್ಪರಗಿ, ಶಿವಾನಂದ ಕಾಗಿ, ಬುಡಾನಸಾಬ ಜಮಾದಾರ, ನಿಂಗಪ್ಪ ಗೊಕಾಂವಿ, ಕುಬೇರ ಸಾರವಾಡ, ಗಿರಮಲ್ಲಪ್ಪ ಶಿಲವಂತ, ಏಳು ಜನರಿಗೆ ಹಣ್ಣಿನ ರಸ ಕುಡಿಸುವ ಮೂಲಕ ಹೋರಾಟಗಾರರನ್ನು ಸಮಾಧಾನ ಪಡಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೊರಗಾವಿ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿದೆ, ಇಲ್ಲಿಯವರೆಗೆ ಮಾಡಿದ ಹೋರಾಟ ಯಶಸ್ಸು ತಂದಿದೆ. ಹೋರಾಟಕ್ಕೆ ಸ್ಪಂದಿಸಿದ ಎಲ್ಲ ಸಮುದಾಯಕ್ಕೆ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆಗಳು ಸಲ್ಲಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ ಪ್ರತಿಭಟನಾ ವೇದಿಕೆಯಲ್ಲಿದ್ದ ಏಳು ಜನ ಹೋರಾಟಗಾರರನ್ನು ಆರೋಗ್ಯದ ಹಿತದೃಷ್ಟಿಯಿಂದ ವೈದ್ಯರ ಸಲಹೆಯಂತೆ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರತಿಭಟನೆ ಹಿನ್ನೆಲೆಯಲ್ಲಿ ಬನಹಟ್ಟಿ ನಗರದಲ್ಲಿ 163ನೇ ಕಲಂ ಜಾರಿಗೊಳಿಸಿ ಜನರನ್ನು ಚದುರಿಸಲಾಯಿತು. ಅರ್ಧ ದಿನಕ್ಕೂ ಹೆಚ್ಚು ಕಾಲ ಬನಹಟ್ಟಿ ಸಂಪೂರ್ಣ ಬಂದ್ ಆಚರಿಸಲಾಯಿತು.
ಬಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ನಿತ್ಯದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸಂಜೆ 5 ಗಂಟೆ ವೇಳೆಗೆ ಯಥಾಸ್ಥಿತಿಯಲ್ಲಿ ನಗರದ ಜನಜೀವನ ಹಾಗೂ ಮಾರುಕಟ್ಟೆ ಚಟುವಟಿಕೆಗಳು ಪುನರಾರಂಭಗೊಂಡವು.
ಸಿಪಿಐ ಆರ್.ಆರ್.ಪಾಟೀಲ, ವಿಜಯ ಮುರಗುಂಡಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ನೂರಾರು ಪೊಲೀಸರು ಬನಹಟ್ಟಿಯಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.