Protest movement in Gubbi against the government 
ರಾಜ್ಯ

ಸರ್ಕಾರದ ವಿರುದ್ಧ ಗುಬ್ಬಿಯಲ್ಲಿ ತಮಟೆ ಚಳವಳಿ

ಗುಬ್ಬಿ : ಮೀಸಲಾತಿ ಜಾರಿಗೆ ನಿರಂತರ ಹೋರಾಟ ಮಾಡಿದ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಸರ್ಕಾರ ವಿಳಂಬನೀತಿ ಅನುಸರಿಸುತ್ತಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಮಾದಿಗ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಒಳ ಮೀಸಲಾತಿ ಜಾರಿ ಕೂಡಲೇ ಮಾಡಬೇಕೆಂದು ಆಗ್ರಹಿಸಿ ತಾಲೂಕಿನ ಮಾದಾರ ಮಹಾಸಭಾ, ಮಾದಿಗ ಸಮುದಾಯದ ಮುಖಂಡರು ಹಾಗೂ ದಲಿತಪರ ಸಂಘಟನೆಗಳು ಒಗ್ಗೂಡಿ ತಾಲೂಕು ಕಚೇರಿಯ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ತಮಟೆ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ತಾಲೂಕು ಕಚೇರಿ ತಲುಪಿದ ಪ್ರತಿಭಟನಾಕಾರರು ಸರ್ಕಾರದ ವಿಳಂಬ ಖಂಡಿಸಿ ಘೋಷಣೆ ಕೂಗಿ ನಂತರ ಜಿಲ್ಲಾ ಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಪ್ರಿಯಾಂಕಾ ಖರ್ಗೆ, ಎಚ್.ಸಿ.ಮಹದೇವಪ್ಪ ವಿರುದ್ಧ ಘೋಷಣೆ ಕೂಗಿದರು.
ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ಮಾತನಾಡಿ, ಮೂರು ದಶಕದ ಕಾಲ ಮೀಸಲಾತಿ ಹೋರಾಟ ನಡೆಸಿದ್ದು, ಮಾದಿಗ ಸಮುದಾಯ. ಹೋರಾಟದ ಫಲ ಮಾತ್ರ ಛಲವಾದಿ ಸೇರಿದಂತೆ ಕೊರಮ, ಕೊರಚ, ಲಂಬಾಣಿ ಹೀಗೆ ಅನೇಕ ಜನಾಂಗ ಪಡೆದಿದೆ. ಆದರೆ ಈ ಮೀಸಲಾತಿಗೆ ಬಹುಸಂಖ್ಯೆಯ ಮಾದಿಗ ಸಮುದಾಯಕ್ಕೆ ಹೆಚ್ಚು ಒಳ ಮೀಸಲಾತಿ ನೀಡುವಂತೆ ಸರ್ಕಾರ ನೇಮಿಸಿದ ಆಯೋಗವೇ ತಿಳಿಸಿದೆ, ಆದರೆ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ನೀಡುವಲ್ಲಿ ಜಾಣತನ ಪ್ರದರ್ಶನ ಮಾಡುತ್ತಿದೆ ಎಂದು ಆರೋಪಿಸಿದರು.
ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ಕೊಡಿಯಲ ಮಹದೇವು ಮಾತನಾಡಿ, ಮಾದಿಗ ಸಮುದಾಯ ಶತಮಾನಗಳಿಂದ ತುಳಿತಕ್ಕೆ ಒಳಗಾಗಿದೆ. ದಲಿತರಲ್ಲಿ ನಮ್ಮವರೇ ನಮ್ಮನ್ನು ತುಳಿಯುವ ಕೆಲಸ ನಿರಂತರ ನಡೆದುಬಂದಿದೆ. ಎಚ್ಚೆತ್ತ ಮಾದಿಗ ಸಮಾಜ ಶಿಕ್ಷಣ ಸಂಘಟನೆ ಮೂಲಕ ಹೋರಾಟವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಮುಖಂಡರಾದ ಈಶ್ವರಯ್ಯ, ನಟರಾಜು, ಲಕ್ಷ್ಮೀಪತಿ, ಮನೋಹರ್, ಬಸವರಾಜ್, ನರಸಿಯಪ್ಪ, ದಲಿತ್ ಗಂಗಣ್ಣ, ಜಿ.ವಿ.ಮಂಜುನಾಥ್, ಚೇಳೂರು ಶಿವನಂಜಪ್ಪ ಇತರರಿದ್ದರು.