Protest in front of the police station, complaint against 18 people 
ರಾಜ್ಯ

ಠಾಣೆ ಮುಂದೆ ಪ್ರತಿಭಟನೆ 18 ಜನರ ವಿರುದ್ಧ ದೂರು

ಚಿಂತಾಮಣಿ: ತಾಲೂಕಿನ ಬೈರೇಬಂಡ ಗ್ರಾಮದಲ್ಲಿ ಇತ್ತೀಚೆಗೆ ಅಪ್ರಾಪ್ತನ ಮದುವೆ ತಡೆದಿದ್ದಕ್ಕೆ ಹೃದಯಾಘಾತವಾಗಿ ತಂದೆ ಮೃತಪಟ್ಟ ಪ್ರಕರಣ ಬೇರೆ ತಿರುವು ಪಡೆದುಕೊಂಡಿದೆ.
ಗುಂಪು ಕಟ್ಟಿಕೊಂಡು ಬಂದು ಠಾಣೆ ಮುಂಭಾಗ ಮೃತದೇಹ ಇಟ್ಟು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಠಾಣೆಯ **ಪೇದೆ ರವಿಕುಮಾರ್​ ನೀಡಿದ ದೂರಿನ ಮೇರೆಗೆ ಬೈರೇಬಂಡ ಗ್ರಾಮದ 18 ಜನರ ವಿರುದ್ಧ ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಾಗಿತ್ತು?: ಮೇ 14ರಂದು ಬೈರೇಬಂಡ ಗ್ರಾಮದ ವೆಂಕಟರವಣಪ್ಪ ಅವರು ಅಪ್ರಾಪ್ತ ಪುತ್ರನಿಗೆ ಮದುವೆ ಮಾಡುತ್ತಿದ್ದಾರೆ ಎಂದು ಪೊಲೀಸ್​ ಕಂಟ್ರೋಲ್​ ರೂಂಗೆ ಬಂದ ಮಾಹಿತಿ ಮೇರೆಗೆ ಬಟ್ಲಹಳ್ಳಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಮದುವೆ ತಡೆದು ಅಪ್ರಾಪ್ತನಿಗೆ ಮದುವೆ ಮಾಡದಂತೆ ಬುದ್ಧಿ ಹೇಳಿದ್ದರು.
ಅಂದು ರಾತ್ರಿ 1-.30ಕ್ಕೆ ವೆಂಕಟರವಣಗೆ ಹೃದಯಘಾತವಾಗಿದ್ದು, ಆಸ್ಪತ್ರೆಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದರು. ಸಾವಿಗೆ ಪೊಲೀಸರೇ ಕಾರಣ ಎಂದು ದೂರಿ 50 ರಿಂದ -60 ಜನರು ಮೃತ ದೇಹವನ್ನು ಮೇ 15ರಂದು ಬೆಳಗ್ಗೆ ಠಾಣೆ ಮುಂದೆ ಇಟ್ಟು ಪ್ರತಿಭಟಿಸಲು ಬಂದಿದ್ದರು. ಆಗ ಠಾಣಾಧಿಕಾರಿ ಎಎಸ್​ಐ ಬಾಬಾಜಾನ್​ ಮೃತ ದೇಹವನ್ನು ಠಾಣೆ ಬಳಿ ಏಕೆ ಇಡುತ್ತಿದ್ದೀರಿ ಎಂದು ಕೇಳಿ, ತಡೆಯಲು ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿ ಶವ ಇಟ್ಟು ಪ್ರತಿಭಟಿಸಿದ್ದರು.
ಅಕ್ರಮವಾಗಿ ಗುಂಪು ಕಟ್ಟಿಕೊಂಡು ಠಾಣಾ ಆವರಣದೊಳಗೆ ಪ್ರವೇಶ ಮಾಡಿ ಪೊಲೀಸರನ್ನು ತಡೆದು ಸರ್ಕಾರಿ ಕೆಲಸಕ್ಕೆ ಅಡಿಪಡಿಸಿದ ಬೈರೇಬಂಡ, ಈತ ಮಾಕನಹಳ್ಳಿ, ದೇವನಹಳ್ಳಿ ತಾಲೂಕು ಹೊಸೂರು ಗ್ರಾಮದ ಒಟ್ಟು 18 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.