ರಾಯಚೂರು
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ಗೊಂದಲ, ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲು ಅನ್ವಯಿಸುವಂತೆ ಒತ್ತಾಯಿಸಿ ಫೆ.23 ರಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿಯಿಂದ ಸಚಿವರ ಮನೆಗಳ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಅಬ್ರಹಾಂ ಹೊನ್ನಟಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಸುಪ್ರಿಂಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಒಳಮೀಸಲು ಜಾರಿಗೊಳಿಸುವ ತೀರ್ಮಾನ ಮಾಡಿದೆಯಾದರೂ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಅನುಷ್ಠಾನ ಗೊಳಿ ಸುವಲ್ಲಿ ಗೊಂದಲ, ಲೋಪ ಅನುಸರಿಸುತ್ತಿದೆ. ಮೀಸಲಾತಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಾತ್ರವಲ್ಲ ನೇರನೇಮಕಾತಿ, ಬಡ್ತಿ, ಬ್ಯಾಕ್ ಲಾಗ್, ಗುತ್ತಿಗೆ ಸೇರಿ ಎಲ್ಲ ರಂಗಗಳಲ್ಲಿಯೂ ಒಳಮೀಸಲಾತಿ ಜಾರಿಗೊಳಿಸಬೇಕು ಎಂದರು.
ಎಸ್‌ಇಪಿ ಅನುದಾನ ಹಂಚಿಕೆಯಲ್ಲಿಯೂ ಮೀಸಲು ಪ್ರಮಾಣದಲ್ಲಿಯೇ ಅನುದಾನ ಹಂಚಿಕೆ ಮಾಡಬೇಕು. ಶಾಶ್ವತ ಆಯೋಗ ರಚಿಸಿ ಗೊಂದಲ ನಿವಾರಿಸಬೇಕು. ಆದಿಜಾಂಬವ ಸೇರಿದಂತೆ ಎಸ್‌ಸಿ ನಿಗಮಗಳಿಗೆ 2 ಸಾವಿರ ಕೋಟಿ ರೂ ಅನುದಾನ ಹಂಚಿಕೆ ಮಾಡಬೇಕು. ಎಸ್ಸಿ ಸಮೂದಾಯಗಳಿಗೆ ಶೇ.17 ಮೀಸಲ ಜಾರಿಗೆ ಷೆಡ್ಯೂಲ್ 9 ಸೇರ್ಪಡೆಗೆ ಜಾರಿಗೆ ಕೇಂದ್ರದ ಮೇಲೆ ಒತ್ತಡ ಹಾಕಬೇಕೆಂದು ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಪಿ.ಅನಿಲ್‌ಕುಮಾರ, ಎಸ್.ರಾಜು, ಶರಣಪ್ಪ, ರಮೇಶ, ಚನ್ನಪ, ಪ್ರವೀಣಕುಮಾರ ಇದ್ದರು.