ಸೋಮವಾರಪೇಟೆಯ ಬಾಸ್ಕೆಟ್‌ಬಾಲ್ ಮೈದಾನದ ಬಳಿ ನಿರ್ಮಿಸಲಾಗುತ್ತಿರುವ ತಡೆಗೋಡೆ ಕಾಮಗಾರಿಯನ್ನು ಮಾಜಿ ಸಚಿವ ಅಪ್ಪಚ್ಚು ರಂಜನ್ ಪರಿಶೀಲಿಸಿದರು.
- ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಬಾಸ್ಕೆಟ್‌ಬಾಲ್ ಮೈದಾನದ ಬದಿ
- ತಡೆಗೋಡೆ ಕಾಮಗಾರಿ
ಸೋಮವಾರಪೇಟೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಬಾಸ್ಕೆಟ್‌ಬಾಲ್ ಮೈದಾನದ ಬದಿಯಲ್ಲಿ ನಿರ್ಮಿಸಲಾಗುತ್ತಿರುವ ತಡೆಗೋಡೆ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ಅಪ್ಪಚ್ಚು ರಂಜನ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಕಳಪೆ ಕಾಮಗಾರಿ ನಡೆಸುತ್ತಿರುವುದನ್ನು ಪ್ರಶ್ನಿಸಿ ಸ್ಥಳೀಯರು ಕಾಮಗಾರಿಗೆ ತಡೆಯೊಡ್ಡಿದ್ದು, ಅಧಿಕಾರಿಗಳು ಕಾಮಗಾರಿಯ ಗುಣಮಟ್ಟವನ್ನು ಸಮರ್ಪಕವಾಗಿ ಪರಿಶೀಲಿಸುತ್ತಿಲ್ಲ ಎಂದು ದೂರಿದರು. ಕಳಪೆ ಕಾಮಗಾರಿಯಿಂದಾಗಿ ರಸ್ತೆ ಬದಿಯಲ್ಲಿ ಸಂಚರಿಸುವುದಕ್ಕೂ ಆತಂಕ ಎದುರಾಗಿದೆ ಎಂದು ಸ್ಥಳೀಯರು ಅಪ್ಪಚ್ಚು ರಂಜನ್ ಅವರ ಗಮನಕ್ಕೆ ತಂದರು.
ಅರ್ಧಕ್ಕೆ ಸ್ಥಗಿತಗೊಂಡಿರುವ ತಡೆಗೋಡೆ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅಪ್ಪಚ್ಚು ರಂಜನ್, ಕಾಮಗಾರಿ ಮೇಲ್ನೋಟಕ್ಕೆ ಅವೈಜ್ಞಾನಿಕವಾಗಿರುವುದು ಕಂಡು ಬಂದಿದೆ. ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಕಾಮಗಾರಿ ಸ್ಥಗಿತಗೊಂಡಿದೆ. ಈ ಹಿಂದೆ ಸಣ್ಣ ನೀರಾವರಿ ಇಲಾಖೆಯಿಂದ ಟರ್ಫ್ ಮೈದಾನದ ಬದಿಯಲ್ಲಿ ನಿರ್ಮಿಸಿದ್ದ ತಡೆಗೋಡೆಯೂ ಕುಸಿದು ಬಿದ್ದಿತ್ತು. ಪದೇ ಪದೆ ಕಳಪೆ ಕಾಮಗಾರಿ ನಡೆಯುತ್ತಿದ್ದು, ಇದಕ್ಕೆ ಯಾರು ಹೊಣೆ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಕಳಪೆ ಕಾಮಗಾರಿಗೆ ಅವಕಾಶ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕುರಿತು ಲೋಕಾಯುಕ್ತಕ್ಕೂ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ವರ್ಷದಲ್ಲೇ ಬಿರುಕು ಬಿಟ್ಟ ರಸ್ತೆ: ಆಲೇಕಟ್ಟೆ-ತೋಳೂರುಶೆಟ್ಟಳ್ಳಿ ರಸ್ತೆ ನಿರ್ಮಾಣಗೊಂಡು ವರ್ಷ ಕಳೆಯುವ ಮುನ್ನವೇ ಹಾಳಾಗಿದ್ದು, ಕಾಂಕ್ರೀಟ್ ರಸ್ತೆ ಅಲ್ಲಲ್ಲಿ ಬಿರುಕು ಬಿಟ್ಟಿದೆ ಎಂದು ರಂಜನ್ ಆರೋಪಿಸಿದರು. ಈಗಾಗಲೇ ಬಿರುಕು ಬಿಟ್ಟಿರುವ ಕಾಂಕ್ರೀಟ್ ರಸ್ತೆಯನ್ನು ಕಿತ್ತುಹಾಕಿ, ಸರ್ವಋತು ರಸ್ತೆಯಾಗಿ ಗುಣಮಟ್ಟದೊಂದಿಗೆ ಮರು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಟರ್ಫ್ ಮೈದಾನ ನಿರ್ವಹಣೆಗೆ ಆಗ್ರಹ: ಸೋಮವಾರಪೇಟೆಯ ಹಾಕಿ ಪ್ರೇಮಿಗಳ ಬಹುದಿನಗಳ ಬೇಡಿಕೆಯಂತೆ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಟರ್ಫ್ ಮೈದಾನ ನಿರ್ಮಿಸಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡ ಬಳಿಕವೂ ಮೈದಾನ ಸಮರ್ಪಕ ನಿರ್ವಹಣೆಯಿಲ್ಲದೆ ಅವ್ಯವಸ್ಥೆಯಿಂದ ಕೂಡಿದೆ ಎಂದು ರಂಜನ್ ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಿಸಿದ ಗುತ್ತಿಗೆದಾರ, ಕಂಪನಿ ಏಳು ವರ್ಷಗಳ ಕಾಲ ಮೈದಾನವನ್ನು ನಿರ್ವಹಿಸಬೇಕಿದೆ. ಹೀಗಾಗಿ ಇಲಾಖೆಯ ಇಂಜಿನಿಯರ್ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಮೈದಾನದ ಸ್ಥಿತಿಗತಿಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರರನ್ನು ಕರೆದು ಕಟ್ಟುನಿಟ್ಟಿನ ಸೂಚನೆ ನೀಡಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಶಾಸಕರು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಕುಶಾಲನಗರ ಹಾಗೂ ಮಡಿಕೇರಿಯಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಿಬ್ಬೆಟ್ಟ ಧರ್ಮಪ್ಪ, ಎಸ್.ಆರ್. ಸೋಮೇಶ್, ಹರೀಶ್‌ಕುಮಾರ್, ಶರತ್‌ಚಂದ್ರ ಸೇರಿದಂತೆ ಮತ್ತಿತರರು ಇದ್ದರು.