ಸರಗೂರು ಪಟ್ಟಣದ ಬಸ್ ನಿಲ್ದಾಣ ಮುಂಭಾಗ ಇಟ್ನ ಗ್ರಾಮಸ್ಥರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಸರಪಳಿ ನಿರ್ಮಿಸಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದರು.
- ಶ್ರೀ ಚಿಕ್ಕದೇವಮ್ಮನ ಸನ್ನಿಧಿ ಹಾಗೂ ಹಾಲುಗಡ ಸಮೀಪದ ಗಣೇಶನ ಗುಡಿ ವೃತ್ತ
- ಬಾರ್ ಅನ್ನು ತಕ್ಷಣ ತೆರವುಗೊಳಿಸಬೇಕೆಂದು
ಸರಗೂರು: ತಾಲೂಕಿನ ಶ್ರೀ ಚಿಕ್ಕದೇವಮ್ಮನ ಸನ್ನಿಧಿ ಹಾಗೂ ಹಾಲುಗಡ ಸಮೀಪದ ಗಣೇಶನ ಗುಡಿ ವೃತ್ತದಲ್ಲಿ ತೆರೆಯಲಾಗಿರುವ ಬಾರ್ ಅನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಿ ಇಟ್ನ ಗ್ರಾಮಸ್ಥರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಂತೆ ಮಾಸ್ತಮ್ಮ ದೇವಸ್ಥಾನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಬಸ್ ನಿಲ್ದಾಣದ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಕೆಲ ಹೊತ್ತು ರಸ್ತೆ ಸಂಚಾರ ತಡೆದರು. ನಂತರ ಅದೇ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ತೆರಳಿ ಕೆಲ ಹೊತ್ತು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೋಹನಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.
ಪಿಡಿಒ ನಾಗೇಂದ್ರ, ಬಾರ್ ತೆರೆಯಲು ಜಾಗ ನೀಡಿದ ರಾಜಮ್ಮ ಹಾಗೂ ಬಾರ್ ಮಾಲೀಕ ಪೋತರಾಜು ಅವರ ವಿರುದ್ಧ ಪ್ರತಿಭಟನಾಕಾರರು ಪಟ್ಟಣ ಠಾಣೆಗೆ ದೂರು ನೀಡಿದರು. ಅಲ್ಲದೆ ಅಬಕಾರಿ ಅಧಿಕಾರಿಗಳು ಬಾರ್ ಅನ್ನು ಮುಚ್ಚಿಸಿದರಲ್ಲದೆ, ಮುಂದಿನ ದಿನಗಳಲ್ಲಿ ತೆರಯಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯವಾಯಿತು. ಬಾರ್ ಅನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಜಿಪಂ ಮಾಜಿ ಸದಸ್ಯ ಚಿಕ್ಕವೀರನಾಯಕ, ಉದ್ಯಮಿ ನಿಂಗರಾಜು, ಪುರಸಭೆ ಮಾಜಿ ಅಧ್ಯಕ್ಷ ಚಾಕಹಳ್ಳಿ ಕೃಷ್ಣ, ವಕೀಲರಾದ ರವಿ, ಸಿ.ವಿ.ನಾಗರಾಜು, ದೇವಸ್ಥಾನ ಸಮಿತಿ ಅಧ್ಯಕ್ಷ ದೊಡ್ಡ ವೀರ ನಾಯಕ, ಬಿಜೆಪಿ ತಾಲೂಕು ಅಧ್ಯಕ್ಷರಾದ ಸಿ.ಕೆ.ಗಿರೀಶ್, ವೆಂಕಟೇಶ್, ಮಂಜುನಾಥ, ಜೆಡಿಎಸ್ ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ಮುಖಂಡರಾದ ಸರಗೂರು ಶಿವಣ್ಣ, ಮೊತ್ತ ಬಸವರಾಜಪ್ಪ, ಸರಗೂರು ಕೃಷ್ಣ, ಪುರದಕಟ್ಟೆ ಬೆಟ್ಟನಾಯಕ, ಸಾಗರೆ ಶಂಕರ್, ವಾಲ್ಮೀಕಿ ಸಿದ್ದರಾಜು, ಗ್ರಾಪಂ ಸದಸ್ಯ ಜಯರಾಮ್, ಇಟ್ನ ಯಜಮಾನರಾದ ನಿಂಗರಾಜು,ಚಿನ್ನನಾಯಕ ಇತರರಿದ್ದರು.