ಬೆಂಗಳೂರು : ರಾಜ್ಯದ ವಿವಿಧ ಸರ್ಕಾರಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಗ್ರಂಥಪಾಲಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ನೇತೃತ್ವದಲ್ಲಿ ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಸುಮಾರು 18 ವರ್ಷಗಳಿಂದ ಗ್ರಂಥಪಾಲಕರ ನೇಮಕಾತಿ ನಡೆದಿಲ್ಲ. ಇದರಿಂದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ವಿವಿಧ ವಿದ್ಯಾರ್ಹತೆ ಪಡೆದಿರುವ ಸಾವಿರಾರು ಅಭ್ಯರ್ಥಿಗಳು ಉದ್ಯೋಗಾವಕಾಶಕ್ಕಾಗಿ ಕಾಯುವಂತಾಗಿದೆ. ರಾಜ್ಯದ ವಿವಿಧ ಸಂಸ್ಥೆಗಳಲ್ಲಿ ಸುಮಾರು 10ರಿಂದ 12 ಸಾವಿರ ವೃತ್ತಿಪರ ಗ್ರಂಥಪಾಲಕರ ಹುದ್ದೆಗಳು ಖಾಲಿ ಇವೆ ಎಂದು ಸಂಘದ ಅಧ್ಯಕ್ಷ ಡಾ.ಎಸ್.ಎಲ್.ಕಾಡದೇವರಮಠ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಸೇವಾ ಭದ್ರತೆ ಕಲ್ಪಿಸುವುದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ ಗ್ರಂಥಾಲಯ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಮತ್ತು ಸಂಘದ ಪ್ರತಿನಿಧಿಗಳೊಂದಿಗೆ ವ್ಯವಸ್ಥಿತವಾಗಿ ಚರ್ಚೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಹಿರಿಯ ನಟ ‘ಮುಖ್ಯಮಂತ್ರಿ’ ಚಂದ್ರು, ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ, ಜ್ಯೋತಿಷಿ ಮಹರ್ಷಿ ಆನಂದ ಗುರೂಜಿ ಪಾಲ್ಗೊಂಡು ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದರು.