ವಿಜಯಪುರ ಜಿಲ್ಲಾಡಳಿತಕ್ಕೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಮುಕುಂದ ಕುಲಕರ್ಣಿ, ಪವನ ಕುಲಕರ್ಣಿ, ಸಮೀರ್ ಕುಲಕರ್ಣಿ ಇತರರಿದ್ದಾರೆ. 
ರಾಜ್ಯ

ಜನಿವಾರ ತೆಗೆಸಿದ ಕ್ರಮ ಖಂಡಿಸಿ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಸಿಇಟಿ ಪರೀಕ್ಷೆ ವೇಳೆ ನಡೆದ ಘಟನೆ
  • ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ಆಕ್ರೋಶ
ವಿಜಯಪುರ: ಸಿಇಟಿ ಪರೀಕ್ಷೆ ಸಂದರ್ಭ ಬ್ರಾಹ್ಮಣ ಸಮುದಾಯ ವಿದ್ಯಾರ್ಥಿಯ ಜನಿವಾರ ತೆಗೆಸಿದ ಕ್ರಮ ಖಂಡಿಸಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಜಿಲ್ಲಾಧ್ಯಕ್ಷ ಮುಕುಂದ ಕುಲಕರ್ಣಿ ಮಾತನಾಡಿ, ಬೆಂಗಳೂರಿನ ಮಡಿವಾಳದ ಕೃಪಾನಿಧಿ ಕಾಲೇಜಿನಲ್ಲಿ ಏ.23 ಮತ್ತು 24ರಂದು ನಡೆದ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿ ಜನಿವಾರ ತೆಗೆಸಲಾಗಿದೆ. ಈ ಕ್ರಮ ಖಂಡನೀಯ. ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದರು.
ಜನಿವಾರ ಧರಿಸುವುದು ಬ್ರಾಹ್ಮಣ ಸಮಾಜದ ಸಾಂಪ್ರದಾಯಿಕ ಗುರುತು. ಜನಿವಾರ ನಮ್ಮ ಸಮಾಜದ ಹೆಮ್ಮೆ. ನಮ್ಮ ಸಮಾಜದ ಗರ್ವದ ಪ್ರತೀಕವಾದ ಜನಿವಾರವನ್ನು ತೆಗೆಸಿದ್ದು ಆಘಾತಕಾರಿ. ಜನಿವಾರದಿಂದ ಯಾವ ರೀತಿಯಾಗಿ ಪರೀಕ್ಷೆಯಲ್ಲಿ ನಕಲು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ ಅವರು, ಅನವಶ್ಯಕವಾಗಿ ವಿದ್ಯಾರ್ಥಿಯ ಜನಿವಾರ ತೆಗೆಯಿಸಿ ನಮ್ಮ ಸಮಾಜಕ್ಕೆ ಅಪಮಾನಿಸಿದ್ದು ಖಂಡನಾರ್ಹ. ಕಳೆದ ವರ್ಷವೂ ಇದೇ ರೀತಿಯಾಗಿ ನಡೆದ ಸಂದರ್ಭದಲ್ಲಿಯೂ ನಾವು ಹೋರಾಟ ಮಾಡಿದ್ದೆವು. ಆದರೆ ಪುನಃ ಅದೇ ಘಟನೆ ಮರುಕಳಿಸಿರುವುದು ನಮ್ಮ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ ಎಂದರು. ರಾಜ್ಯ ಉಪಾಧ್ಯಕ್ಷ ಹಾಗೂ ಕಣ್ವ ಮಠ ವಿಜಯಪುರ ಶಾಖೆಯ ವಿಚಾರಣಕರ್ತ ರಾಘವೇಂದ್ರ ಆಲಗೂರ ಮಾತನಾಡಿ, ಕಳೆದ ವರ್ಷವೇ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರೂ ಮತ್ತೆ ಬ್ರಾಹ್ಮಣನ ಅಸ್ಮಿತೆಯಾದ ಜನಿವಾರನ್ನು ತೆಗೆಯಿಸಿರುವುದು ಖೇದಕರ. ಈ ಘಟನೆಯಲ್ಲಿ ಭಾಗಿಯಾದ ಸಿಬ್ಬಂದಿಯನ್ನು ವಜಾಗೊಳಿಸಬೇಕು ಹಾಗೂ ಹಿರಿಯ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಿ ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆಗೆ ಒಳಪಡಿಸಬೇಕು ಎಂದರು.
ಈ ರೀತಿ ಪದೇ ಪದೇ ನಮ್ಮ ಸಮುದಾಯಕ್ಕೆ ಅಪಮಾನ ಮಾಡುವುದು ಸರಿಯಲ್ಲ. ಇನ್ಮುಂದೆ ಈ ರೀತಿಯಾದ ಘಟನೆ ನಡೆಯದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಮತ್ತೆ ಇದೇ ರೀತಿ ಘಟನೆ ನಡೆದ ಪಕ್ಷದಲ್ಲಿ ಬ್ರಾಹ್ಮಣ ಸಮುದಾಯ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವನ ಕುಲಕರ್ಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಮೀರ್ ಕುಲಕರ್ಣಿ, ನಗರ ಅಧ್ಯಕ್ಷ ಪ್ರಶಾಂತ ದೇಶಪಾಂಡೆ, ಯುವ ಘಟಕದ ಜಿಲ್ಲಾಧ್ಯಕ್ಷ ರೋಹನ್ ಆಪ್ಟೆ, ಮಹಿಳಾ ಪ್ರಧಾನಕಾರ್ಯದರ್ಶಿ ಮಿತಾ ದೇಸಾಯಿ, ವಿವೇಕ ತಾವರಗೇರಿ, ಹರೀಶ ಜೋಶಿ, ವೆಂಕಟೇಶ ಗುಡಿ, ಕೃಷ್ಣ ಗುನಾಳಕರ, ಗೋವಿಂದ ಜೋಶಿ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ರಾಕೇಶ ಜೋಶಿ, ಪವನ ಕಟ್ಟಿ, ಸುಧೀಂದ್ರ ಇಲ್ಲಾಳ, ಶಂಕರ ಕುಲಕರ್ಣಿ, ಶ್ರೀಹರಿ ಜೋಶಿ, ಸುಜಾತಾ ಕುಲಕರ್ಣಿ, ರಾಧಾ ತಾವರಗೇರಿ, ವಿಕಾಸ್ ಪದಕಿ ಇತರರಿದ್ದರು.