ಗ್ರಾಮೀಣ ಮತಕ್ಷೇತ್ರಕ್ಕೆ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಆದ ತಾರತಮ್ಯ ಸರಿಪಡಿಸಬೇಕು, ಕಲಬುರಗಿ ಬರಪೀಡಿತ ಜಿಲ್ಲೆ ಘೋಷಿಸುವಂತೆ ಆಗ್ರಹಿಸಿ ಬಿಜೆಪಿ ಗ್ರಾಮೀಣ ಮಂಡಲದಿಂದ ಕಮಲಾಪುರ ಬಸ್​ ನಿಲ್ದಾಣದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು. ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಶಿವಪ್ರಭು ಪಾಟೀಲ್​, ಹಣಮಂತರಾವ ಮಲಾಜೆ ಇತರರಿದ್ದರು.  
ರಾಜ್ಯ

ಸ್ಪಂದಿಸದಿದ್ರೆ ವಿಧಾನಸೌಧದಲ್ಲಿ ಹೋರಾಟ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಸವರಾಜ ಮತ್ತಿಮಡು ಎಚ್ಚರಿಕೆ
  • ಕಮಲಾಪುರದಲ್ಲಿ ಬಿಜೆಪಿಯಿಂದ ಬೃಹತ್​ ಪ್ರತಿಭಟನೆ
ಕಮಲಾಪುರ: ಬೆಳೆವಿಮೆ ಪರಿಹಾರ ವಿತರಿಸುವಲ್ಲಿ ಗ್ರಾಮೀಣ ಕ್ಷೇತ್ರಕ್ಕೆ ಅನ್ಯಾಯ ಮಾಡಿರುವುದು ಖಂಡಿಸಿ, ಅಲ್ಲದೆ ಜಿಲ್ಲೆಯನ್ನು ಬರಪೀಡಿತ ಎಂದು ೂಷಣೆ ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ಜನತಾ ಪಕ್ಷದ ಗ್ರಾಮೀಣ ಮಂಡಲದಿಂದ ಬಸ್​ ನಿಲ್ದಾಣದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಶನಿವಾರ ಬೃಹತ್​ ಪ್ರತಿಭಟನೆ ನಡೆಸಲಾಯಿತು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ಸಂಕಷ್ಟ ಎದುರಿಸಿದ್ದರು. ಇದೀಗ ಬೆಳೆ ವಿಮೆ ಎರಡನೇ ಕಂತಿನ ಪರಿಹಾರ ವಿತರಣೆಯಲ್ಲಿ ರೈತರಿಗೆ ಅನ್ಯಾಯ ಮಾಡಲಾಗಿದೆ. ಮುಂಗಾರು ಕೈಕೊಟ್ಟಿದ್ದು, ಅನ್ನದಾತರು ಅಕ್ಷರಶ@ ಬೀದಿಗೆ ಬಂದಿದ್ದಾರೆ. ಕೂಡಲೇ ಸರ್ಕಾರ ಜಿಲ್ಲೆಯನ್ನು ಬರಪೀಡಿತ ಎಂದು ೂಷಣೆ ಮಾಡಬೇಕು. ಆ.13ರೊಳಗೆ ಮನವಿಗೆ ಸ್ಪಂದಿಸದಿದ್ದರೆ ವಿಧಾನಸೌಧದ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್​ ಮಾತನಾಡಿ, ಕೃಷಿ, ಕಂದಾಯ, ವಿಮೆ ಕಂಪನಿ ಅಧಿಕಾರಿಗಳ ರ್ನಿಲಕ್ಷದಿಂದಾಗಿ ರೈತರಿಗೆ ವಿಮೆ ಪರಿಹಾರದಲ್ಲಿ ಅನ್ಯಾಯವಾಗಿದೆ. ಹೀಗಾಗಿ ತಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ರೈತರಿಗೆ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಮಾತನಾಡಿ, ಕಾಂಗ್ರೆಸ್​ ಸರ್ಕಾರಕ್ಕೆ ರೈತರ ಕಾಳಜಿಯಿಲ್ಲ. ಹೈಕಮಾಂಡ್​ ಭೇಟಿ, ಮಂತ್ರಿ ಮಂಡಲ ರಚನೆಯಲ್ಲಿ ತಲ್ಲೀನವಾಗಿದೆ. ಸಂಕಷ್ಟದಲ್ಲಿರುವ ರೈತರು ಬಾರುಕೋಲಿನ ಚಾಟಿ ಬೀಸಿದರೆ ಸರ್ಕಾರವೇ ಅಲುಗಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ, ಜಿಪಂ ಮಾಜಿ ಸದಸ್ಯ ಬಸವರಾಜ ಮಾಲಿಪಾಟೀಲ್​, ಡಿಸಿಸಿ ಬ್ಯಾಕ್​ ಮಾಜಿ ನಿರ್ದೇಶಕ ಶರಣಬಸಪ್ಪ ಪಾಟೀಲ್​ ಅಷ್ಟಗಿ, ಬಾಬು ವಾಲಿ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷ ಜಗನ್ನಾಥ ಮಾಲಿಪಾಟೀಲ್​, ಗ್ರಾಮೀಣ ಮಂಡಲ ಅಧ್ಯಕ್ಷ ಗಂಗಪ್ಪಗೌಡ ಪಾಟೀಲ್​, ಪ್ರಧಾನ ಕಾರ್ಯದರ್ಶಿಗಳಾದ ಪ್ರವಿಣ ಮುಚ್ಚಟ್ಟಿ, ಶಿವಕುಮಾರ ಪಾಟೀಲ್​, ಪ್ರಮುಖರಾದ ಉದಯಕುಮಾರ ರಟಕಲ್​, ಶಿವಕುಮಾರ ದೊಶೆಟ್ಟಿ, ಮಲ್ಲಿಕಾರ್ಜುನ ಮರತೂರಕರ, ರಾಜಕುಮಾರ ಮಂಠಾಳೆ, ಗೋರಕನಾಥ ಶಖಾಪುರೆ, ಗುಂಡಪ್ಪ ಸಿರಡೋಣ, ಶರಣಗೌಡ ಹರಕಂಚಿ, ವಿರೇಶ ಜಮಾದಾರ, ರೇವಣಸಿದ್ದಪ್ಪ ಮಂಗಳೂರ, ಚನ್ನವಿರ ಮುನ್ನಳ್ಳಿ, ಭಾಗ್ಯವಂತ ಕೌನಳ್ಳಿ, ಚೇತನ ಡಬರಾಬಾದ್​ ಇತರರಿದ್ದರು.

ಎರಡು ಗಂಟೆ ಹೆದ್ದಾರಿ ಸ್ಥಗಿತ

ಕಲಬುರಗಿ&ಬೀದರ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಬಿಜೆಪಿ ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡಿದರು. ಬೆಳಗ್ಗೆ 10.30ಕ್ಕೆ ಆರಂಭವಾದ ಹೋರಾಟ ಮಧ್ಯಾಹ್ನ 12.30ಕ್ಕೆ ಮುಕ್ತಾಯವಾಯಿತು. ಪ್ರಮುಖ ಮಾರ್ಗ ಇದಾಗಿದ್ದರಿಂದ ರಸ್ತೆಯ ಎರಡು ಮಾರ್ಗದಲ್ಲಿ ನೂರಾರು ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದವು. ಹೋರಾಟ ಮುಗಿಯುತ್ತಿದ್ದಂತೆ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕೃಷಿ ಅಧಿಕಾರಿಗಳು ಆಗಮಿಸಬೇಕೆಂದು ಪಟ್ಟು

ಕೃಷಿ ಇಲಾಖೆ ಜಂಟಿ ನಿರ್ದೇಶಕರು ಅಥವಾ ಸಹಾಯಕ ನಿರ್ದೇಶಕರು ಸ್ಥಳಕ್ಕಾಗಮಿಸಿ ನಮ್ಮ ಸಮಸ್ಯೆ ಆಲಿಸುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಸಿಪಿಐ ಶಿವಶಂಕರ ಸಾಹು, ಪಿಎಸ್​ಐ ಸುಖಾನಂದ ಸಿಂಗೆ ಅವರು ಹೋರಾಟ ಕೈಬಿಡುವಂತೆ ಮನವಿ ಮಾಡಿದರೂ ಕೇಳಲಿಲ್ಲ. ಕೊನೆಗೆ ತಹಸೀಲ್ದಾರ್​ ಮಹಮ್ಮದ್​ ಯುನೂಸ್​ ಅವರು ಮನವಿಪತ್ರ ಸ್ವೀಕರಿಸಿ, ನಿಮ್ಮೆಲ್ಲ ಬೇಡಿಕೆ ಕೃಷಿ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಮೊಟಕುಗೊಳಿಸಿದರು.
"

ಚಿಂಚೋಳಿ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರಿಂದ ಕಡಿಮೆ ಬೆಳೆವಿಮೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಆಳಂದ 182 ಕೋಟಿ ರೂ., ಸೇಡಂ 71 ಕೋಟಿ ರೂ., ಕಲಬುರಗಿಗೆ 95 ಕೋಟಿ ರೂ. ಬಿಡುಗಡೆ ಮಾಡಿದರೆ ಚಿಂಚೋಳಿಗೆ 22 ಕೋಟಿ ರೂ., ಕಮಲಾಪುರಕ್ಕೆ ಕೇವಲ 19 ಕೋಟಿ ರೂ. ಹಾಗೂ ಶಹಾಬಾದ್​ಗೆ 6 ಕೋಟಿ ರೂ. ನೀಡಲಾಗಿದೆ. ಈ ತಾರತಮ್ಯ ಸರಿಪಡಿಸದಿದ್ದರೆ ನಿರಂತರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.

— > ಬಸವರಾಜ ಮತ್ತಿಮಡು, ಶಾಸಕ