ಎಚ್.ಡಿ.ಕೋಟೆ ತಾಲೂಕಿನ ವಡ್ಡರಪಾಳ್ಯದಲ್ಲಿರುವ ಸ್ಮಶಾನ ಜಾಗವನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಪರಭಾರೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಸ್ಮಶಾನ ಜಾಗದಲ್ಲೇ ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ಸಾರ್ವಜನಿಕ ಸ್ಮಶಾನವಾಗಿ ಬಳಸಿಕೊಂಡು ಬರುತ್ತಿದ್ದ ಜಾಗವನ್ನು ಖಾಸಗಿ ವ್ಯಕ್ತಿಗಳು ಸ್ವಂತ ಆಸ್ತಿ ಎಂದು ಹೇಳಿಕೊಂಡು ಪರಭಾರೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ತಾಲೂಕಿನ ವಡ್ಡರಪಾಳ್ಯ ಗ್ರಾಮಸ್ಥರು ಬುಧವಾರ ಸ್ಮಶಾನ ಜಾಗದಲ್ಲೇ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದರು.
ಕರಿಗಾಳ ಗ್ರಾಮದರುವ ಸುಮಾರು 1.31 ಎಕರೆಯಲ್ಲಿ ಹಲವು ದಶಕಗಳಿಂದ ವಡ್ಡರಪಾಳ್ಯ ಗ್ರಾಮಸ್ಥರು ಸ್ಮಶಾನವಾಗಿ ಬಳಸಿಕೊಂಡು ಬರುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿದ್ದು, ಎರಡು ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಅಂತ್ಯಸಂಸ್ಕಾರ ಅದೇ ಜಾಗದಲ್ಲಿ ನಡೆಯುತ್ತಿತ್ತು. ಆದರೆ ಈಗ ಜಾಗ ನಮ್ಮದು ಎಂದು ಖಾಸಗಿ ವ್ಯಕ್ತಿಯೊಬ್ಬರು ಹೇಳಿಕೊಳ್ಳುತ್ತಿದ್ದು, ಅದನ್ನು ಮತ್ತೊಬ್ಬರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಗ್ರಾಮದ ಈರ ಭೋವಿ ಆರೋಪಿಸಿದರು.
ಸ್ಮಶಾನ ಜಾಗ ಕಳೆದುಕೊಂಡರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಯಜಮಾನ ಶ್ರೀನಿವಾಸ ಮಾತನಾಡಿ, ಸಾರ್ವಜನಿಕ ಬಳಕೆಯಲ್ಲಿದ್ದ ಖರಾಬು ಜಮೀನನ್ನು ಖಾಸಗಿ ಹೆಸರಿಗೆ ದಾಖಲಿಸಿ ಪತ್ರ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ವಡ್ಡರಪಾಳ್ಯದಲ್ಲಿ ಬಹುತೇಕ ಭೋವಿ ಸಮುದಾಯದ ಜನರೇ ವಾಸಿಸುತ್ತಿದ್ದು, ಗ್ರಾಮಕ್ಕೆ ಇದ್ದ ಏಕೈಕ ಸ್ಮಶಾನವೂ ಕೈತಪ್ಪುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿ ಸ್ಮಶಾನ ಜಾಗವನ್ನು ಗ್ರಾಮಸ್ಥರಿಗೆ ಮೀಸಲಿಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಮುಖಂಡರಾದ ಸೀತಾರಾಂ, ಸಿದ್ದರಾಜು, ರಾಜಣ್ಣ, ಮಲ್ಲಭೋವಿ, ಶ್ರೀನಿವಾಸ, ರಾಮಸ್ವಾಮಿ, ಸಿದ್ದರಾಮಭೋವಿ, ರಾಮಚಂದ್ರ, ಸ್ವಾಮಿ, ಪರಮೇಶ್, ಮಂಜು, ರಾಮಾಭೋವಿ, ನಾಗರಾಜು, ಕೆಂಚಪ್ಪ, ಬಸವರಾಜು, ಮಲ್ಲಾಭೋವಿ, ಬಾಬು, ಹನುಮಂತ, ಗೋಪಾಲ, ರಮೇಶ, ಮಹಾದೇವ, ಆನಂದ, ರಾಜಣ್ಣ, ಕಾಂತರಾಜು, ವೆಂಕಟರಮಣ, ನರಿಯಭೋವಿ, ಹನುಮಭೋವಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.