ಸವದತ್ತಿ ತಾಲೂಕು ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಸದಸ್ಯರು ಗ್ರೇಡ್-2 ತಹಸೀಲ್ದಾರ ಎಂ.ಎನ್.ಮಠದಗೆ ಮನವಿ ಸಲ್ಲಿಸಿದರು. ಮಹೇಶ ಮುಂಗರವಾಡಿ, ಶಂಕರ ಬೋನಗೇರಿ, ಅಮರೇಶ್ವರ ನಾವದಗಿ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಸವದತ್ತಿ
ಆನ್‌ಲೈನ್ ಹಾಗೂ ರಿಯಾಯಿತಿ ಔಷಧ ಮಾರಾಟ ಖಂಡಿಸಿ ನಗರದಲ್ಲಿ ಬುಧವಾರ ಔಷಧ ವ್ಯಾಪಾರಿಗಳು ಮೌನ ಪ್ರತಿಭಟನೆ ನಡೆಸಿದರು.
ಸವದತ್ತಿ ತಾಲೂಕು ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಸದಸ್ಯರು ಕಪ್ಪುಬಟ್ಟೆ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ಬಳಿಕ ಗ್ರೇಡ್-2 ತಹಶೀಲ್ದಾರ್ ಎಂ.ಎನ್.ಮಠದಗೆ ಮನವಿ ಸಲ್ಲಿಸಿದರು.
ಔಷಧ ವ್ಯಾಪಾರ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ್ದು, ಪರವಾನಗಿ ಪಡೆದ ಸ್ಥಳೀಯ ಔಷಧ ಅಂಗಡಿಗಳು ವೈದ್ಯರ ಮಾನ್ಯ ಚೀಟಿ ಆಧಾರದಲ್ಲೇ ಔಷಧ ಜತೆಗೆ ಸರ್ಕಾರದ ಎಲ್ಲ ನಿಯಮ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಆದರೆ, ಆನ್‌ಲೈನ್ ಔಷಧ ಮಾರಾಟದಲ್ಲಿ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದ್ದು, ಇದರಿಂದ ನಿಷೇಧಿತ ಹಾಗೂ ಔಷಧಗಳು ಯುವಕರು ಮತ್ತು ವ್ಯಸನಿಗಳ ಕೈಗೆ ಸುಲಭವಾಗಿ ಸಿಗುವಂತಾಗಿದೆ. ಇದು ಸಮಾಜದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಲಿದೆ ಎಂದರು.
ಆನ್‌ಲೈನ್ ಇ-ಾರ್ಮಸಿ ಸಂಸ್ಥೆಗಳ ಅಕ್ರಮ ಚಟುವಟಿಕೆ ತಕ್ಷಣ ನಿಲ್ಲಿಸಬೇಕು. 2018ರ ಆಗಸ್ಟ್ 28ರ ಜಿಎಸ್‌ಆರ್ 817(ಇ) ಹಾಗೂ 2020ರ ಮಾರ್ಚ್ 26ರ ಜಿಎಸ್‌ಆರ್ 220(ಇ) ಅಧಿಸೂಚನೆ ಹಿಂಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಮಹೇಶ ಮುಂಗರವಾಡಿ, ಅಮರೇಶ್ವರ ನಾವದಗಿ, ಶಂಕರ ಬೋನಗೇರಿ, ನಾರಾಯಣ ಪೋತದಾರ, ಜ್ಞಾನದೇವ ಕಾತ್ರಾಳ, ಈರಣ್ಣ ಕುರಟ್ಟಿ, ಗುರು ವಾಂಗಿ, ಮುನ್ನಾ ಗೋಲಂದಾಜ, ಸಂತೋಷ ಸೇಠ, ಶ್ರೀಕಾಂತ ತೊರಗಲ್ಲಮಠ, ಬಸವರಾಜ ಅಳಗೋಡಿ, ಸಂದೀಪ ಸಬನೀಸ್ ಇತರರಿದ್ದರು.