ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್  
ರಾಜ್ಯ

ಪಾರ್ಕ್‌ಗಳಲ್ಲಿ ಜಾಗ ಕಬಳಿಕೆ ವಿರುದ್ಧ 5, 6ರಂದು ಪ್ರತಿಭಟನೆ

ಬೆಂಗಳೂರು: ರಾಜ್ಯದ ಪಾರ್ಕ್‌ಗಳಲ್ಲಿ ಶೇ.5 ಜಾಗವನ್ನು ಕ್ರಯ, ಗುತ್ತಿಗೆ, ಬಾಡಿಗೆ ಇನ್ನಿತರ ಉದ್ದೇಶಕ್ಕೆ ಬಳಸಲು ಸರ್ಕಾರ ಹೊರಟಿರುವ ಮಸೂದೆಗೆ ವಿರೋಧ ದಿನೇದಿನೆ ಹೆಚ್ಚಾಗುತ್ತಿದೆ. ವಿಧೇಯಕ ವಿರೋಧಿಸಿ ಶನಿವಾರ ಮತ್ತು ಭಾನುವಾರ (ಸೆ. 5, 6) ಪಾರ್ಕ್‌ಗಳಲ್ಲಿ ಪ್ರತಿಭಟನೆ ಕೈಗೊಂಡಿರುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಮಾಫಿಯಾದ ತಾಳಕ್ಕೆ ತಕ್ಕಂತೆ ಕುಣಿಯುವ ಸಿಎಂ ಡಿ.ಕೆ. ಶಿವಕುಮಾರ್ ಉದ್ಯಾನಗಳ ಕಬಳಿಕೆಗೆ ಬಿಲ್ ಮೂಲಕ ಅವಕಾಶ ನೀಡಿದ್ದಾರೆ. ಆಡಳಿತ ಹಾಗೂ ಪ್ರತಿಪಕ್ಷಗಳು ಉದ್ಯಾನಗಳನ್ನು ರಕ್ಷಿಸಬೇಕು. ಆದರೆ, ಸರ್ಕಾರ ಅಭಿವೃದ್ಧಿ ನೆಪದಲ್ಲಿ ಶೇ.5 ಅನ್ಯ ಉದ್ದೇಶಕ್ಕೆ ಬಳಕೆಗೆ ಮಾಡಿದೆ.
ಮುಂದೆ ಅದು ಶೇ.50ಕ್ಕೆ ಹೆಚ್ಚಿಸಬಹುದು. ನಾಡಪ್ರಭು ಕೆಂಪೇಗೌಡರು ಕೆರೆಗಳನ್ನು ಕಟ್ಟಿ ಗಾರ್ಡನ್ ಸಿಟಿ ಮಾಡಿದ್ದರು. ಈಗ ಇವರು ಉದ್ಯಾನಗಳನ್ನು ನಾಶ ಮಾಡಿದರೆ ದೆಹಲಿಯಂತೆ ವಾಯುಮಾಲಿನ್ಯದ ನಗರವಾಗುತ್ತದೆ. 40 ವರ್ಷದ ಹಿಂದೆ ಕಾಂಗ್ರೆಸ್ ಸರ್ಕಾರ ಪಾರ್ಕ್, ಕ್ರೀಡಾಂಗಣದಲ್ಲಿ ಅನ್ಯ ಉದ್ದೇಶಕ್ಕಾಗಿ ಬಳಸಬಹುದು ಎಂದು ಕಾನೂನು ತಂದಿತ್ತು.
ನಂತರ ಹೋರಾಟ ನಡೆದು ಅದನ್ನು ವಾಪಸ್ ಪಡೆಯಲಾಯಿತು. ಈಗ ಮತ್ತೆ ಅದೇ ಕಾನೂನು ಬರುತ್ತಿದೆ. ಸಿಎಂ ಮಸೂದೆಯನ್ನು ಹಿಂಪಡೆಯಬೇಕು. ಚರ್ಚೆಗೆ ಅವಕಾಶ ನೀಡುತ್ತೇವೆ ಎಂದು ಸರ್ಕಾರ ಹೇಳಿದೆ. ಚರ್ಚೆ ಬೇಕಿಲ್ಲ, ಬಿಲ್ ಅನ್ನು ಹಿಂದಕ್ಕೆ ಪಡೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯಪಾಲರಿಗೆ ಮನವಿ
ಸುರಂಗ ರಸ್ತೆ ಯೋಜನೆಯಲ್ಲಿ ಪಾರ್ಕಿಂಗ್‌ನ ಅಗತ್ಯವಿಲ್ಲ. ಮಾಲ್ ನಿರ್ಮಿಸಲು ಲಾಲ್ಬಾಗ್ ಜಾಗವನ್ನು ಬಳಸಲು ನಿರ್ಧರಿಸಿದ್ದಾರೆ. ಯೋಜನೆ ಗುತ್ತಿಗೆ ಪಡೆದಿರುವ ಉದ್ಯಮಿ ಗೌತಮ್ ಅದಾನಿ ಅವರನ್ನು ಮನೆಗೆ ಕರೆಸಿ ತಿಂಡಿ ತಿನ್ನಿಸಿ ಕಳುಹಿಸಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಅದೇ ಅದಾನಿಯನ್ನು ಟೀಕೆ ಮಾಡುತ್ತಾರೆ. ಇಂತಹ ಇಬ್ಬಗೆಯ ಸರ್ಕಾರ ನೀತಿಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತೇವೆ. ನಾಗರಿಕರಿಂದ ಸಹಿ ಪಡೆದು ರಾಜ್ಯಪಾಲರಿಗೆ ಸಲ್ಲಿಸಿ ಪಾರ್ಕ್ ಉಳಿಸಿ, ಬೆಂಗಳೂರು ರಕ್ಷಿಸಿ ಎಂಬ ಅಭಿಯಾನ ನಡೆಸುವುದಾಗಿ ಆರ್. ಅಶೋಕ್ ತಿಳಿಸಿದರು.