Garden City University 
ರಾಜ್ಯ

ಬುಡಕಟ್ಟು ಸಮುದಾಯ ಜ್ಞಾನದ ಸಂರಕ್ಷಕರು

ಪ್ರಮುಖ ಮುಖ್ಯಾಂಶಗಳು

  • * ಡಾ. ಕ್ರಿಸ್ಟೊ ಜೋಸೆಫ್ ಅಭಿಮತ
  • * ವಿಶ್ವ ಮೂಲನಿವಾಸಿಗಳ ದಿನ ಆಚರಣೆ

ಬೆಂಗಳೂರು: ಬುಡಕಟ್ಟು ಸಮುದಾಯಗಳು ಜ್ಞಾನದ ಸಂರಕ್ಷಕರು. ತಲೆಮಾರುಗಳಿಂದ ತಲೆಮಾರಿಗೆ ಜ್ಞಾನವನ್ನು ಹಸ್ತಾಂತರಿಸುತ್ತಾ ಬಂದವರು. ಅವರಲ್ಲಿನ ಜ್ಞಾನ ಮತ್ತು ಅನುಭವಗಳು ಭವಿಷ್ಯ ರೂಪಿಸುವಲ್ಲಿ ಪ್ರಸ್ತುತವಾಗಿವೆ ಎಂದು ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕಾರ್ಯತಂತ್ರ ಮತ್ತು ಯೋಜನಾ ವಿಭಾಗದ ನಿರ್ದೇಶಕ ಡಾ. ಕ್ರಿಸ್ಟೊ ಜೋಸೆಫ್ ಅಭಿಪ್ರಾಯಪಟ್ಟಿದ್ದಾರೆ.

ಗ್ಲೋಬಲ್ ಕಲ್ಚರ್ ಆರ್ಗನೈಸೇಷನ್ ಹಾಗೂ ಏರೊನೀರೊ ಸಂಸ್ಥೆಗಳ ಸಹಯೋಗದಲ್ಲಿ ನಗರದ ಗಾರ್ಡನ್ ಸಿಟಿ ವಿಶ್ವವಿದ್ಯಾಲಯ ಆಯೋಜಿಸಿದ್ದ ವಿಶ್ವ ಮೂಲನಿವಾಸಿಗಳ ದಿನದ ಎರಡನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು. ಕಳೆದ ವರ್ಷ ಆಯೋಜಿಸಿದ್ದ ವಿಶ್ವ ಮೂಲನಿವಾಸಿಗಳ ದಿನದ ಮೊದಲ ಆವೃತ್ತಿ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಈ ಬಾರಿ ಬುಡಕಟ್ಟು ಸಮುದಾಯಗಳು ಹಾಗೂ ಅವರ ಜ್ಞಾನ ವ್ಯವಸ್ಥೆಗಳತ್ತ ಹೆಚ್ಚಿನ ಗಮನ ಹರಿಸಲಾಗಿದೆ ಎಂದರು.
ಬುಡಕಟ್ಟು ಸಮುದಾಯಗಳ ಜ್ಞಾನ, ಸಂಸ್ಕೃತಿ, ಕಲೆ ಹಾಗೂ ಪರಂಪರೆಯನ್ನು ಗುರುತಿಸಿ ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬುಡಕಟ್ಟು ಸಂಘಟನೆಗಳು, ಕಲಾವಿದರು ಹಾಗೂ ಸಮುದಾಯದ ಪ್ರತಿನಿಧಿಗಳಿಗೆ ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಸಿದರು. ಇದೇ ವೇಳೆ ಬುಡಕಟ್ಟು ಪರಂಪರೆಯನ್ನು ಬಿಂಬಿಸುವ ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಮಾಡಲಾಯಿತು. ಕಲಬುರಗಿ, ಉತ್ತರ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ಆಗಮಿಸಿದ್ದ ಲಂಬಾಣಿ, ಸಿದ್ದಿ ಮತ್ತು ಸೋಲಿಗ ಬುಡಕಟ್ಟು ಸಮುದಾಯಗಳ ಕಲಾ ತಂಡಗಳು ಸಾಂಸ್ಕೃತಿಕ ಪ್ರದರ್ಶನ ನೀಡಿದವು.
ಜಿಸಿಯು ಉಪಕುಲಪತಿ ಡಾ.ಎಂ. ರಾಮಚಂದ್ರ ಗೌಡ, ಕುಲಸಚಿವ ಡಾ. ಎಂ.ಎಸ್. ಶೀಜಾ, ಗ್ಲೋಬಲ್ ಕಲ್ಚರ್ ಸಂಸ್ಥೆಯ ಸಂಸ್ಥಾಪಕ ಅರುಣ್ ಶಿವ, ಸಂಗೀತಾ, ಡಾ. ದೀಪ್ತಿ ನವರತ್ನ, ಡಾ. ಎ.ಎಸ್. ಪ್ರಭಾಕರ್, ಡಾ. ಶ್ರೀನಿವಾಸ ಮೂರ್ತಿ, ಸಾಮ್ರಾಟ್ ಅಶೋಕ್ ಗೌತಮ್ ಉಪಸ್ಥಿತರಿದ್ದರು.