ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಹನುಮ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಹನುಮ ಪಾದಯಾತ್ರೆ ಕರಪತ್ರವನ್ನು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಬಿಡುಗಡೆ ಮಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ರವಿ, ಬಿಜೆಪಿ ಯುವ ಮೋರ್ಚಾ ನಗರ ಕಾರ್ಯದರ್ಶಿ ಮಹೇಂದ್ರಕುಮಾರ್​ ಇದ್ದರು.  
ರಾಜ್ಯ

ದೇಗುಲ, ಸ್ಮಾರಕಗಳ ರಕ್ಷಣೆ ಎಲ್ಲರ ಹೊಣೆ / NELAMANGAL

ನೆಲಮಂಗಲ : ಹಿಂದೂ ದೇವಾಲಯಗಳು, ಸ್ಮಾರಕಗಳು ಸೇರಿ ಬೆಟ್ಟಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ತಿಳಿಸಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳ ಸಹಯೋಗದಲ್ಲಿ ಹನುಮ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಹನುಮ ಪಾದಯಾತ್ರೆ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ತಾಲೂಕಿನಾದ್ಯಂತ ಸಾಕಷ್ಟು ಇತಿಹಾಸ ಪ್ರಸಿದ್ಧ ದೇವಾಲಯಗಳು, ಸ್ವಾರಕ ಸೇರಿ ಬೆಟ್ಟಗಳಿದ್ದು, ಅವುಗಳ ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಹಲವು ವರ್ಷಗಳಿಂದ ಹಿಂದೂ ದೇವಾಲಯಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗದಳ ಪಾದಯಾತ್ರೆ ಮೂಲಕ ಅರಿವು ಮೂಡಿಸುತ್ತಿರುವುದು ಸಂತಸದ ಸಂಗತಿ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎನ್​.ರಾಮ್​ ಮಾತನಾಡಿ, ತಾಲೂಕಿನಲ್ಲಿ ಸುಮಾರು 800 ವರ್ಷಗಳ ಇತಿಹಾಸವಿರುವ 19ಕ್ಕೂ ಹೆಚ್ಚು ದೇವಾಲಯಗಳಿದ್ದು, ನಿಜಗಲ್ಲು ಬೆಟ್ಟದಲ್ಲಿರುವ ರಾಜರ ಕಾಲದ ಕುದುರೆಲಾಯ, ಗರಡಿಮನೆ, ಕಾವಲು ಗೋಪುರ, ರಾಣಿ ಅರಮನೆ, ನೀರಿನ ಕೊಳ ಸುತ್ತಮುತ್ತಲೂ ಪರಿಸರ ಇದೆ, ಇವುಗಳ ಸಂರಕ್ಷಣೆ ಮಾಡಿ ಪ್ರವಾಸಿ ತಾಣವನ್ನಾಗಿಸಬೇಕಾಗಿದೆ. ಡಿ.2ರಂದು ನೆಲಮಂಗಲದಿಂದ ದಾಬಸ್​ಪೇಟೆ ಬಳಿಯ ಸಿದ್ದರಬೆಟ್ಟಕ್ಕೆ ಸಾವಿರಾರು ಭಕ್ತರನ್ನು ಒಳಗೊಂಡು ಹನುಮ ಜಯಂತಿ ಪ್ರಯುಕ್ತ ಬೃಹತ್​ ಮಟ್ಟದ ಪಾದಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶ್ರೀರಾಮಸೇನೆ ತಾಲೂಕು ಅಧ್ಯಕ್ಷ ಮೋಹನ್​ಕುಮಾರ್​, ಜಿಲ್ಲಾ ಸಂಚಾಲಕ ಚಂದ್ರರಾವ್​, ಭಜರಂಗದಳ ಜಿಲ್ಲಾ ಸಹ ಸಂಯೋಜಕ್​ ವಿನಯ್​, ವಿಶ್ವ ಹಿಂದು ಪರಿಷತ್ತು ಉಪಾಧ್ಯಕ್ಷ ಬೈರಣ್ಣ, ಮುಖಂಡ ಅರುಣ್​ರಾಜ್​ ಇತರರು ಇದ್ದರು.