ಇನ್ಫ್ಲುಯೆಂಜಾ ಲಸಿಕೆ  
ರಾಜ್ಯ

ಇನ್ಫ್ಲುಯೆಂಜಾ ಲಸಿಕೆ ಮುಖಾಂತರ ತಾಯಂದಿರು ಮತ್ತು ನವಜಾತ ಶಿಶುಗಳ ರಕ್ಷಣೆ | Influenza Vaccination

| ಡಾ. ಹೇಮಾ ದಿವಾಕರ್, (ಬೆಂಗಳೂರಿನ ದಿವಾಕರ್ಸ್ ಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀರೋಗತಜ್ಞೆ ಮತ್ತು ವೈದ್ಯಕೀಯ ನಿರ್ದೇಶಕಿ)

ಜಾಗತಿಕವಾಗಿ ಪ್ರತಿ ವರ್ಷ 2,90,000-6,50,000 ಉಸಿರಾಟಕ್ಕೆ ಸಂಬಂಧಿಸಿದ ಸಾವುಗಳು ಸಂಭವಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್ಒ) ಅಂದಾಜು ಮಾಡಿರುವುದರಿಂದ ಇನ್ಫ್ಲುಯೆಂಜಾ (ಫ್ಲೂ) ಸಾರ್ವಜನಿಕ ಆರೋಗ್ಯ ರಕ್ಷಣೆಯ ಪ್ರಮುಖ ಕಾಳಜಿಯಾಗಿಯೇ ಉಳಿದಿದೆ.
ಇವರಲ್ಲಿ ಅತಿಹೆಚ್ಚು ಅಪಾಯಕ್ಕೆ ಗುರಿಯಾಗಿರುವವರಲ್ಲಿ ಗರ್ಭಿಣಿಯರು ಸೇರಿದ್ದಾರೆ. ಇವರು ತೀವ್ರ ಸ್ವರೂಪದ ಹೆಚ್ಚಿನ ಅಪಾಯಗಳನ್ನು ಎದುರಿಸುತ್ತಾರೆ. ಭಾರತದಲ್ಲಿ, ಋತುಮಾನಕ್ಕೆ ತಕ್ಕಂತೆ ಜ್ವರದ (ಇನ್ಫ್ಲುಯೆಂಜಾ/ ಫ್ಲು) ಹಾವಳಿಯು ಸಾಮಾನ್ಯವಾಗಿ ಕಂಡುಬರುತ್ತದೆ. ಸಾಂಕ್ರಾಮಿಕ ಕಾಯಿಲೆಯಾಗಿರುವ ಇನ್ಫ್ಲುಯೆಂಜಾ (ಫ್ಲೂ) ರೋಗಲಕ್ಷಣಗಳು ಸೌಮ್ಯದಿಂದ ತೀವ್ರವಾಗಿರುತ್ತವೆ. ಜ್ವರ, ಮೂಗು ಸೋರುವಿಕೆ, ಗಂಟಲು ನೋವು, ಸ್ನಾಯು ನೋವು ಇದರ ಸಾಮಾನ್ಯ ಲಕ್ಷಣಗಳಾಗಿವೆ.

ಗರ್ಭಿಣಿಯರಿಗೆ ಹೆಚ್ಚುವರಿ ರಕ್ಷಣೆ ಏಕೆ ಅಗತ್ಯ?

"ಪ್ರತಿಯೊಬ್ಬ ಪ್ರಸೂತಿ ತಜ್ಞರು ಬರೆದುಕೊಡುವ ಔಷಧಿಗಳು ಜ್ವರದ ವಿರುದ್ಧ ರಕ್ಷಣೆ ಒಳಗೊಂಡಿರಬೇಕು. ಗರ್ಭಧಾರಣೆಯ ಸಂದರ್ಭದಲ್ಲಿ ತಾಯಿ ತನ್ನ ಉದರದಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ಅವಕಾಶ ನೀಡುವುದರಿಂದ ಈ ಅವಧಿಯಲ್ಲಿ ತಾಯಂದಿರು ಪ್ರಬಲ ರೋಗನಿರೋಧಕ ಶಕ್ತಿ ಹೊಂದಿರಬೇಕು. ತಾಯಿಯ ಹೃದಯ ಮತ್ತು ಶ್ವಾಸಕೋಶಗಳು ಭ್ರೂಣದ ಹೆಚ್ಚುವರಿ ಗರ್ಭಾಶಯದ ಹೊರಗಿನ ಅವಲಂಬನೆಗೆ ಸಹ ನೆರವಾಗುತ್ತವೆ. ಈ ಹಂತದಲ್ಲಿ ಜ್ವರ ಉದ್ಭವಿಸಿದರೆ ಅದು ಗರ್ಭಿಣಿಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಪ್ರತಿಕಾಯ ವರ್ಗಾವಣೆಯ ಮೂಲಕ ನವಜಾತ ಶಿಶುವಿನ ರಕ್ಷಣೆ

ತಾಯಿಯಿಂದ ಮಗುವಿಗೆ ರೋಗನಿರೋಧಕ ಶಕ್ತಿ ರವಾನೆಯಾಗುವುದು - ಪ್ರಕೃತಿಯ ಮೊದಲ ಲಸಿಕೆಯಾಗಿದೆ". ತಾಯಿಗೆ ಲಸಿಕೆ ಹಾಕಿದಾಗ, ಅವಳು ತನ್ನ ಸ್ವಂತ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೆ, ರಕ್ಷಣಾತ್ಮಕ ಪ್ರತಿಕಾಯಗಳ ಸ್ಥಳಾಂತರ ಪ್ರಕ್ರಿಯೆ ಮೂಲಕ ತನ್ನ ನವಜಾತ ಶಿಶುವಿಗೂ ತಾತ್ಕಾಲಿಕ ರೋಗನಿರೋಧಕ ಶಕ್ತಿಯನ್ನು ರವಾನಿಸುತ್ತಾಳೆ ಎನ್ನುವುದು ತಾಯಿಗೆ ಇನ್ಫ್ಲುಯೆಂಜಾ ಲಸಿಕೆ ನೀಡುವುದನ್ನು ಬಲವಾಗಿ ಪ್ರತಿಪಾದಿಸಲು ಒಂದು ಪ್ರಮುಖ ಕಾರಣವಾಗಿದೆ.
ಕಾಯಿಲೆ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರಗಳ (ಸಿಡಿಸಿ) ಅಧ್ಯಯನಗಳ ಪ್ರಕಾರ, ತಾಯಿಗೆ ಲಸಿಕೆ ನೀಡುವುದರಿಂದ ಶಿಶುಗಳಲ್ಲಿ ಇನ್ಫ್ಲುಯೆಂಜಾ ಸೋಂಕಿನ ಅಪಾಯವು ಶೇ.63ರಷ್ಟು ಕಡಿಮೆಯಾಗುತ್ತದೆ. ದುರ್ಬಲ ಶಿಶುಗಳಿಗೆ, ಇದು ಸೌಮ್ಯ ಪ್ರಮಾಣದಲ್ಲಿ ಅನಾರೋಗ್ಯ ಅನುಭವಿಸುವ ಮತ್ತು ತೀವ್ರವಾದ ಜೀವಕ್ಕೆ ಅಪಾಯಕಾರಿಯಾದ ಸೋಂಕು ಎದುರಿಸುವುದರ ನಡುವಣ ವ್ಯತ್ಯಾಸವಾಗಿದೆ. ಇದು ಜೀವ ಉಳಿಸುವ ಸೌಲಭ್ಯವೂ ಆಗಿದೆ.
ಗರ್ಭಧಾರಣೆ, ಹೆರಿಗೆ ಮತ್ತು ಶಿಶು ಜನ್ಮತಳೆದ ನಂತರದ ದಿನಗಳಲ್ಲಿ ಲಸಿಕೆ - "ಲಸಿಕೆ ಐಚ್ಛಿಕವಲ್ಲ - ಇದು ಪ್ರಸವಪೂರ್ವದ ಅಗತ್ಯ ಕಾಳಜಿ". ಪ್ರತಿ ವರ್ಷ, ಇನ್ಫ್ಲುಯೆಂಜಾ ತಳಿಗಳು ವರ್ಷಕ್ಕೊಮ್ಮೆ ಬದಲಾಗುವುದರಿಂದ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕಾಗುತ್ತದೆ. ಪ್ರತಿಯೊಬ್ಬ ಮಹಿಳೆ, ಅವಳು ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವಾಗ, ಗರ್ಭಿಣಿಯಾಗಿರುವಾಗ ಅಥವಾ ಹೆರಿಗೆ ನಂತರ, ಜ್ವರದ ಲಸಿಕೆ ಪಡೆಯಬೇಕು. ಲಸಿಕೆ ಪಡೆದುಕೊಂಡರೆ ಗರ್ಭೀಣಿಯರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನು ಶೇ.40ರಷ್ಟು ಮತ್ತು ನವಜಾತ ಶಿಶುವಿನಲ್ಲಿ ಜ್ವರದ ಸೋಂಕಿನ ಸಂಭವನಿಯತೆಯನ್ನು ಶೇ.33ರಷ್ಟು ಕಡಿಮೆ ಮಾಡಬಹುದು ಎಂಬುದನ್ನು ಜಾಗತಿಕ ಅಧ್ಯಯನಗಳು ಸೂಚಿಸುತ್ತವೆ.