ದೊಡ್ಡಬಳ್ಳಾಪುರದ ಗ್ರಾಮಾಂತರ ಪೊಲೀಸ್ ವಶಕ್ಕೆ ಪಡೆದ ಹಸುಗಳು.
ದೊಡ್ಡಬಳ್ಳಾಪುರ : ಕಸಾಯಿಖಾನೆಗೆ ಸಾಗಿಸುತ್ತಿದ್ದ ನಾಲ್ಕು ಹಸುಗಳನ್ನು ಬುಧವಾರ ರಾತ್ರಿ ಗ್ರಾಮಾಂತರ ಪೊಲೀಸರು ರಸಿದ್ದಾರೆ. ಬಕ್ರೀದ್ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ಮಾಡಲಾಗಿದ್ದು, ಕಂಟನಕುಂಟೆ ಸಮೀಪದ ಚೆಕ್ಪೋಸ್ಟ್ನಲ್ಲಿ ವಾಹನಗಳ ತಪಾಸಣೆ ಮಾಡಲಾಗುತ್ತಿತ್ತು. ಈ ವೇಳೆ ಅನುಮಾನಾಸ್ಪದವಾಗಿ ಸಾಗುತ್ತಿದ್ದ ವಾಹನ ತಪಾಸಣೆ ಮಾಡಿದಾಗ ನಾಲ್ಕು ಹಸುಗಳನ್ನು ಕಸಾಯಿಖಾನೆಗೆ ರವಾನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಗೌರಿಬಿದನೂರು ಕಡೆಯಿಂದ ದೊಡ್ಡಬಳ್ಳಾಪುರದತ್ತ ಹಸುಗಳ ಸಾಗಣೆ ಮಾಡಲಾಗುತ್ತಿದ್ದು, ಪ್ರಕರಣದಲ್ಲಿ ದೊಡ್ಡಬಳ್ಳಾಪುರ ರಾಜೀವ್ ಗಾಂಧಿ ಬಡಾವಣೆಯ ಯತೀಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಕ್ಷಣೆ ಮಾಡಲಾದ ಹಸುಗಳನ್ನು ಗೋಶಾಲೆಗೆ ಬಿಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.