ಪಿರಿಯಾಪಟ್ಟಣ:
ದೇಶದ ಏಕತೆ, ಅಖಂಡತೆ ಹಾಗೂ ಸಾರ್ವಭೌಮತ್ವ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯದ್ದಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಕೆ.ವೆಂಕಟೇಶ್ ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಹಲವು ಹೋರಾಟಗಾರರು ತಮ್ಮ ವೈಯಕ್ತಿಕ ಬದುಕು ತ್ಯಜಿಸಿ ತ್ಯಾಗ ಮತ್ತು ಬಲಿದಾನಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಸ್ವಾತಂತ್ರೃ ದಿನ ಕೇವಲ ಆಚರಣೆಗೆಲ್ಲ. ಇದು ನಮ್ಮ ಹೆಮ್ಮೆಯ ಪ್ರತೀಕ ಹಾಗೂ ಜವಾಬ್ದಾರಿಯ ಸಂಕೇತವಾಗಿದೆ ಎಂದರು.
ಕ್ಷೇತ್ರದಲ್ಲಿ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಭೂಮಿಪೂಜೆ ನೆರವೇರಿಸಲಾಗಿದೆ. ಹಲವು ಯೋಜನೆಗಳು ಪ್ರಗತಿಯಲ್ಲಿದ್ದು, ಮಹತ್ವಾಕಾಂಕ್ಷಿ 150 ಕೆರೆ ನೀರು ತುಂಬಿಸುವ ಯೋಜನೆ ಹಾಗೂ ಕುಸುಮ್-ಸಿ ಯೋಜನೆಗೆ ಹೆಚ್ಚಿನ ಒತ್ತು ನೀಡಿ ರೈತರಿಗೆ 24 ಗಂಟೆಗಳ ವಿದ್ಯುತ್ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಎ.ಕುಮಾರ್ ಮಾತನಾಡಿ, ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ ಬ್ರಿಟಿಷರು ದೇಶದ ಆಂತರಿಕ ದುರ್ಬಲತೆಗಳನ್ನು ಬಳಸಿಕೊಂಡು ಸುಮಾರು 3 ಶತಮಾನಗಳ ಕಾಲ ಆಡಳಿತ ನಡೆಸಿದರು. ಬಳಿಕ ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ನಿರಂತರ ಹೋರಾಟದ ಫಲವಾಗಿ ದೇಶವು ಸ್ವಾತಂತ್ರೃ ಪಡೆದಿದೆ ಎಂದರು.
ಯುವಪೀಳಿಗೆ ದೇಶಭಕ್ತಿ, ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರೀಯ ಏಕತೆಯ ಮನೋಭಾವವನ್ನು ಬೆಳೆಸಿಕೊಳ್ಳುವುದರ ಜತೆಗೆ ಸಂವಿಧಾನದಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರಲಿದೆ ಎಂದು ಅಭಿಪ್ರಾಯಪ್ಟರು.
ತಹಸೀಲ್ದಾರ್ ನಿಸರ್ಗ ಪ್ರಿಯ ಧ್ವಜ ಸದೇಶ ನೀಡಿದರು. ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಪಥಸಂಚಲನ ಹಾಗೂ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದಿರುವ ತಾಲೂಕಿನ ವಿವಿಧ ಶಾಲೆ ವಿದ್ಯಾರ್ಥಿಗಳನ್ನು ಹಾಗೂ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹೊಸಳ್ಳಿ ಕೃಷ್ಣೇಗೌಡ, ತಾಪಂ ಇಒ ಸುನೀಲ್ ಕುಮಾರ್, ಬಿಇಒ ರವಿ ಪ್ರಸನ್ನ, ಪುರಸಭೆ ಮುಖ್ಯಾಧಿಕಾರಿ ಎಚ್.ಪಿ.ಮಧು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈ.ಪಿ.ಲೋಕೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ, ಪೊಲೀಸ್ ವೃತ್ತ ನಿರೀಕ್ಷಕ ದೀಪಕ್, ಸಬ್ ಇನ್‌ಸ್ಪೆಕ್ಟರ್ ಪ್ರಸನ್ನ ಇತರರು ಇದ್ದರು.