ಮುಧೋಳ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಸುರಕ್ಷತೆ ಮತ್ತು ವಿಶ್ವಾಸ ಮೂಡಿಸುವ ಆಶಾಕಿರಣ ಆಸರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಎಸ್‌ಐ ಸಿ.ಚ್. ಚಲವಾದಿ ಮಾತನಾಡಿದರು. ಗೋವಿಂದ ಪೂಜಾರಿ, ತಾ.ಪಂ. ವ್ಯವಸ್ಥಾಪಕ ಎಂ.ಬಿ. ಹಾವರಗಿ, ಈರಪ್ಪ ಉಗ್ಗಿನವರ ರೇವಣಸಿದ್ಧಯ್ಯ ಮರೆಗುದ್ದಿ, ಜ್ಯೋತಿಭಾ ಜಾಧವ ಇತರರಿದ್ದರು. 
ರಾಜ್ಯ

ಹಿರಿಯ ನಾಗರಿಕರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ಪ್ರಮುಖ ಮುಖ್ಯಾಂಶಗಳು

  • ಎಎಸ್‌ಐ ಸಿ.ಎಚ್. ಚಲವಾದಿ ಹೇಳಿಕೆ
  • ಆಶಾಕಿರಣ ಆಸರೆ ಕಾರ್ಯಕ್ರಮ
ಮುಧೋಳ: ಹಿರಿಯ ನಾಗರಿಕರು ನಮ್ಮ ಸಮಾಜದ ದಾರಿದೀಪ ಮತ್ತು ದೇಶದ ನಿಜವಾದ ಸಂಪತ್ತು. ಅವರನ್ನು ರಕ್ಷಿಸುವುದು ಹಾಗೂ ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸಿ.ಎಚ್. ಚಲವಾದಿ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ಹಿರಿಯ ನಾಗರಿಕರ ಸುರಕ್ಷತೆ ಮತ್ತು ವಿಶ್ವಾಸ ಮೂಡಿಸುವ ಆಶಾಕಿರಣ ಆಸರೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯು ಹಿರಿಯ ನಾಗರಿಕರ ರಕ್ಷಣೆಗೆ ಸದಾ ಬದ್ಧ. ಹಿರಿಯರಿಗೆ ಸಂಕಷ್ಟದ ವೇಳೆ ನೆರವಾಗುವ ವಿವಿಧ ಸಹಾಯವಾಣಿ ಸಂಖ್ಯೆಗಳು ಮತ್ತು ಕಾನೂನು ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿದರು.
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತಾಲೂಕು ಅಧಿಕಾರಿ ಎಂ.ಬಿ. ಮುದ್ದುನೂರ, ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಿಗುವ ವಿವಿಧ ಸೇವಾ ಸೌಲಭ್ಯಗಳು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಲಾನುಭವಿಗಳಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಿಸಿದರು.
ವೇದಮೂರ್ತಿ ಸೋಮಲಿಂಗಯ್ಯ ಗಣಾಚಾರಿ ಆಶೀರ್ವಚನ ನೀಡುತ್ತಾ, ಹಿರಿಯ ನಾಗರಿಕರನ್ನು ಪೂಜ್ಯ ಭಾವದಿಂದ ಕಾಣಬೇಕು. ಅವರ ಮಾರ್ಗದರ್ಶನದಲ್ಲಿ ನಡೆಯುವುದೇ ನಿಜವಾದ ದೇವರ ಪೂಜೆ ಎಂದು ಹೇಳಿದರು.
ಪಿಎಸ್‌ಐ ರಮೇಶ್ ಬೆಳಗುಂಡಿ, ತುಳಜಾಭವಾನಿ ಸಂಸ್ಥೆ ಅಧ್ಯಕ್ಷ ಗೋವಿಂದ ಪೂಜಾರಿ, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಎಂ.ಬಿ. ಹಾವರಗಿ, ಹಿರಿಯ ನಾಗರಿಕರ ವೇದಿಕೆ ಪದಾಧಿಕಾರಿಗಳು ಹಾಗೂ ತಾಲೂಕಿನ ಅನೇಕ ಹಿರಿಯ ನಾಗರಿಕರು ಉಪಸ್ಥಿತರಿದ್ದರು. ಈರಪ್ಪ ಉಗ್ಗಿನವರ ಸ್ವಾಗತಿಸಿದರು, ರೇವಣಸಿದ್ಧಯ್ಯ ಮರೆಗುದ್ದಿ ನಿರೂಪಿಸಿದರು, ಜ್ಯೋತಿಭಾ ಜಾಧವ ವಂದಿಸಿದರು.