Protecting groundwater is everyone's primary duty. 
ರಾಜ್ಯ

ಅಂರ್ತಜಲ ರಕ್ಷಣೆ ಎಲ್ಲರ ಆದ್ಯ ಕರ್ತವ್ಯ

ಶಿರಾ: ತಾಲೂಕಿನಾದ್ಯಂತ ಸುಮಾರು 120ಕ್ಕೂ ಹೆಚ್ಚು ಬ್ಯಾರೇಜ್​ಗಳನ್ನು ನಿಮಾರ್ಣ ಮಾಡಿದ್ದರ ಫಲವಾಗಿ ಅಂತರ್ಜಲ ಹೆಚ್ಚಳವಾಗಿತ್ತು. ಆದರೆ ಕಳೆದ ವರ್ಷ ಮಳೆ ಬಾರದೆ ಇದ್ದ ಕಾರಣ ಕೊಳವೆ ಬಾವಿಗಳನ್ನು ರೈತರು ಹೆಚ್ಚು ಕೊರೆಸಿದ್ದರಿಂದ ತಾಲೂಕಿನಲ್ಲಿ ಅಂತರ್ಜಲ ಕಡಿಮೆಯಾಗಿದೆ. ಇದು ರೈತರಿಗೆ ಎಚ್ಚರಿಕೆ ಗಂಟೆಯಾಗಿದ್ದು, ಅಂರ್ತಜಲ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ನಗರದ ಬೆಸ್ಕಾಂ ಕಚೇರಿ ಬಳಿ ನೂತನ ಹೇಮಾವತಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರದ ಅಂತರ್ಜಲ ಕಡಿಮೆಯಾಗಿರುವ ತಾಲೂಕಿನಲ್ಲಿ ಶಿರಾ ಸೇರ್ಪಡೆಯಾಗಿದೆ. ಅದಕ್ಕೆ ಪರಿಹಾರವಾಗಿ ಈ ವರ್ಷ ಅಂತರ್ಜಲ ಹೆಚ್ಚಳಕ್ಕೆ ಭದ್ರ ಮೇಲ್ದಂಡೆ ಯೋಜನೆಯಡಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ 62 ಬ್ಯಾರೇಜ್​ಗಳನ್ನು ನಿಮಾರ್ಣ ಮಾಡುತ್ತಿದ್ದೇನೆ. ಬ್ಯಾರೇಜ್​ಗಳ ಕಾಮಗಾರಿ ನಡೆಯುತ್ತಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದನ್ನೆಲ್ಲಾ ಏಕೆ ಮಾಡುತ್ತಿದ್ದೇನೆಂದರೆ ತಾಲೂಕಿನಲ್ಲಿ ರೈತರಿಗೆ ನೀರಿನ ಸಮಸ್ಯೆ ಆಗಬಾರದು ಎಂಬುದಕ್ಕೆ ಇದನ್ನೆ ತಾಲೂಕಿನ ಜನರು ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ತಾಲೂಕೊಂದರಲ್ಲಿ ಅತಿ ಹೆಚ್ಚು ಬ್ಯಾರೇಜ್​ ನಿಮಾರ್ಣ ಆಗಿದ್ದರೆ ಅದು ಶಿರಾ ತಾಲೂಕಿನಲ್ಲಿ ಮಾತ್ರ ಎಂದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಜೀನಿ ಸಂಸ್ಥೆ ಮಾಲೀಕ ದಿಲೀಪ್​ ಕುಮಾರ್​, ತಾಲೂಕು ಯುವ ಕಾಂಗ್ರೆಸ್​ ಅಧ್ಯಕ್ಷ ಹೇಮಂತ್​ ಗೌಡ, ನಗರ ಅಧ್ಯಕ್ಷ ಅಂಜನ್​ ಕುಮಾರ್​, ನಗರಸಭೆ ಸದಸ್ಯರಾದ ರಾಧಾಕೃಷ್ಣ, ನಗರಸಭೆ ಆಶ್ರಯ ಸಮಿತಿ ಸದಸ್ಯ ನೂರುದ್ದೀನ್​, ಮಾಜಿ ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಬಾಂಬೆ ರಾಜಣ್ಣ ಇದ್ದರು.