Protect the interests of consumers.
ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ.) ಇಲ್ಲ ಎಂಬ ಕಾರಣಕ್ಕೆ ಸುಮಾರು ಮೂರೂವರೆ ಲಕ್ಷ ಮನೆಗಳಿಗೆ ಕಾಯಂ ವಿದ್ಯುತ್ ಸಂಪರ್ಕ ನಿರಾಕರಿಸಿ, ತಾತ್ಕಾಲಿಕ ಸಂಪರ್ಕದ ಹೆಸರಿನಲ್ಲಿ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿರುವುದು ಬೆಸ್ಕಾಂ ಮತ್ತಿತರ ವಿದ್ಯುತ್ ಕಂಪನಿಗಳ ದಬ್ಬಾಳಿಕೆಗೆ ಕೈಗನ್ನಡಿಯಾಗಿದೆ. ಸಾಮಾನ್ಯ ಗ್ರಾಹಕರು ಪ್ರತಿ ಯೂನಿಟ್‌ಗೆ 5.80 ರೂ ಪಾವತಿಸಿದರೆ, ಇವರಿಂದ 10.50ರೂ ವಸೂಲಿ ಮಾಡಲಾಗುತ್ತಿರುವುದು ತೀರಾ ಅನ್ಯಾಯ.
ಮನೆ ನಿರ್ಮಾಣ ಮುಗಿದಿದ್ದರೂ ನಿಯಮಗಳ ಗೊಂದಲದಿಂದಾಗಿ ತಿಂಗಳಿಗೆ ಸಾವಿರಾರು ರೂಪಾಯಿ ಹೆಚ್ಚುವರಿ ಬಿಲ್ ಕಟ್ಟುವುದು ಮಧ್ಯಮ ವರ್ಗದವರ ಬದುಕನ್ನು ದುಸ್ತರಗೊಳಿಸಿದೆ. ಒ.ಸಿ. ಕಡ್ಡಾಯದ ನಿಯಮದಲ್ಲಿ ಸಣ್ಣ ಪ್ರಮಾಣದ ನಿವೇಶನದಾರರಿಗೆ ವಿನಾಯಿತಿ ನೀಡುವ ಅಥವಾ ಪರ್ಯಾಯ ಮಾರ್ಗ ಕಂಡುಕೊಳ್ಳುವ ತುರ್ತು ಅಗತ್ಯವಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಈ ಅವೈಜ್ಞಾನಿಕ ದರ ನೀತಿಯನ್ನು ಸರಿಪಡಿಸಿ, ಗ್ರಾಹಕರಿಗೆ ನ್ಯಾಯ ಒದಗಿಸಬೇಕು. ತಾತ್ಕಾಲಿಕ ವಿದ್ಯುತ್ ಸಂಪರ್ಕಗಳ ಸಂಖ್ಯೆ ಬೆಸ್ಕಾಂ ವ್ಯಾಪ್ತಿಯಲ್ಲಿ 1,54,567 ಇದ್ದರೆ, ಜೆಸ್ಕಾಂ ವ್ಯಾಪ್ತಿಯಲ್ಲಿ 36 ಸಾವಿರ ಇವೆ.
ಶೇಕಡ 80ಕ್ಕಿಂತ ಹೆಚ್ಚು ವಸತಿ ಕಟ್ಟಡಗಳಲ್ಲಿ ಸೈಡ್‌ಬ್ಯಾಕ್ ಬಿಡದಿರುವುದು ಅಥವಾ ಸಣ್ಣಪುಟ್ಟ ಬೈಲಾ ಉಲ್ಲಂಘನೆಗಳಿಂದಾಗಿ ಸ್ಥಳೀಯ ಸಂಸ್ಥೆಗಳು ಒಸಿ ನೀಡುವುದಿಲ್ಲ. ಆದರೆ, ಬಿಲ್ಡರ್‌ಗಳು ಮಾಡಿದ ತಪ್ಪಿಗೆ ಅಥವಾ ಅನಿವಾರ್ಯವಾಗಿ ಜಾಗದ ಕೊರತೆಯಿಂದ ಸಣ್ಣ ಮನೆ ಕಟ್ಟಿಕೊಂಡ ಸಾರ್ವಜನಿಕರು ಈಗ ಪ್ರತಿ ತಿಂಗಳು ದುಬಾರಿ ಬಿಲ್ ಕಟ್ಟಿ ದಂಡ ತೆರಬೇಕಾಗಿದೆ. ಸುಪ್ರೀಂ ಕೋರ್ಟ್‌ನ ಆದೇಶ ಪಾಲನೆ ಹಾಗೂ ನಾಗರಿಕರ ಹಿತರಕ್ಷಣೆ ಎರಡನ್ನೂ ಸರಿದೂಗಿಸುವಂತಹ ಮಧ್ಯಂತರ ಹಾಗೂ ಶಾಶ್ವತ ಪರಿಹಾರಗಳನ್ನು ಸರ್ಕಾರ ಕಂಡುಕೊಳ್ಳಬೇಕಿದೆ. ವಾಸವಿರುವ ಮನೆಗಳೆಂದು ದೃಢಪಟ್ಟರೆ, ಅಲ್ಲಿಯವರೆಗೆ ಅವರಿಗೆ ವಾಣಿಜ್ಯ ದರ ವಿಧಿಸುವ ಬದಲು ವಿಶೇಷ ವಸತಿ ದರವನ್ನು ನಿಗದಿಪಡಿಸುವುದು ಸೂಕ್ತ.
ಕಟ್ಟಡ ಸುರಕ್ಷತೆಯ ಅಫಿಡವಿಟ್ ಪಡೆದು, ಸಣ್ಣಪುಟ್ಟ ಉಲ್ಲಂಘನೆಗಳಿದ್ದಲ್ಲಿ ಒಂದು ನಿರ್ದಿಷ್ಟ ಅವಧಿಯವರೆಗೆ ಕಾಯಂ ವಿದ್ಯುತ್ ಸಂಪರ್ಕ ನೀಡಬೇಕು. ಈಗಾಗಲೇ ಸರ್ಕಾರವು 1,200 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ಒಸಿ ಕಡ್ಡಾಯದಿಂದ ವಿನಾಯಿತಿ ನೀಡಿದೆ. ಆದರೆ ಸದ್ಯ ಮೂರೂವರೆ ಲಕ್ಷಕ್ಕೂ ಹೆಚ್ಚು ಮನೆಗಳು ಸಂಕಷ್ಟದಲ್ಲಿರುವುದರಿಂದ, ಇದನ್ನು ಒಂದಿಷ್ಟು ದೊಡ್ಡ ವಿಸ್ತೀರ್ಣದ (ಉದಾಹರಣೆಗೆ 2,400 ಚದರ ಅಡಿವರೆಗೆ) ಕೇವಲ ಸ್ವಂತ ವಾಸದ ಮನೆಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ತರಲು ಚಿಂತನೆ ನಡೆಸಬೇಕು.
ಒಸಿ ನೀಡದೆ ಗ್ರಾಹಕರಿಗೆ ವಂಚಿಸುವ ಬಿಲ್ಡರ್‌ಗಳು ಮತ್ತು ನಕ್ಷೆ ಉಲ್ಲಂಘನೆ ಮಾಡುವಾಗ ಮೌನವಾಗಿದ್ದು ಈಗ ಒಸಿ ನಿರಾಕರಿಸುವ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ತಪ್ಪು ಮಾಡಿದವರನ್ನು ಬಿಟ್ಟು ಮನೆ ಖರೀದಿಸಿದ ಜನಸಾಮಾನ್ಯರನ್ನು ಶಿಕ್ಷಿಸುವುದು ಸರಿಯಲ್ಲ. ವಿದ್ಯುತ್ ಮತ್ತು ನೀರು ಕೇವಲ ಸೌಕರ್ಯಗಳಲ್ಲ, ಅವು ಗೌರವಯುತ ಜೀವನ ನಡೆಸಲು ಬೇಕಾದ ಮೂಲಭೂತ ಹಕ್ಕುಗಳು. ಆದ್ದರಿಂದ ನ್ಯಾಯಾಲಯದ ಆದೇಶ ವ್ಯಾಪ್ತಿಯಲ್ಲೇ ಸರ್ಕಾರವು ಬಡ ಮತ್ತು ಮಧ್ಯಮ ವರ್ಗದ ಹಿತದೃಷ್ಟಿಯಿಂದ ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳುವುದು ಅತ್ಯಗತ್ಯವಾಗಿದೆ.