ನೆಲಮಂಗಲ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷ ಎನ್.ಗಣೇಶ್, ಪೌರಾಯುಕ್ತ ಗಂಗಾಧರ್ ಇದ್ದರು.
ನೆಲಮಂಗಲ : ಕೋಟ್ಯಂತರ ಬೆಲೆ ಬಾಳುವ ಸರ್ಕಾರಿ ಆಸ್ತಿ ಹಾಗೂ ಪಾರ್ಕ್ ಜಾಗ ಸಂರಕ್ಷಣೆ ಮಾಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ನಗರಸಭೆ ಅಧ್ಯಕ್ಷ ಎನ್.ಗಣೇಶ್ ಸೂಚಿಸಿದರು.
ಬಸವನಹಳ್ಳಿಯ ನಗರಸಭೆ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಇತ್ತೀಚೆಗೆ ಸಾರ್ವಜನಿಕರು ನಗರಸಭೆ ಅಧಿಕಾರಿಗಳ ಬಗ್ಗೆ ಸರ್ಕಾರಿ ಹಾಗೂ ಪಾರ್ಕ್ ಜಾಗ ವಿಚಾರವಾಗಿ ದೂರು ನೀಡಿದ್ದಾರೆ. ಅಧಿಕಾರಿಗಳು ಸರ್ಕಾರದಿಂದ ತೆಗೆದುಕೊಳ್ಳುವ ಸಂಬಳಕ್ಕೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಪ್ರಸ್ತುತ ನೆಲಮಂಗಲ ವೇಗವಾಗಿ ಬೆಳೆಯುತ್ತಿದೆ. ಹಾಗಾಗಿ ಅಧಿಕಾರಿಗಳು ಇದನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕು ಎಂದರು.
ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ನಂಜಯ್ಯ ಮಾತನಾಡಿ, ನಗರಸಭೆ ಅನುದಾನದಲ್ಲಿ ಕಳೆದ ಬಾರಿ 40 ಸಿಸಿ ಕ್ಯಾಮರಾ ಅಳವಡಿಸಿದ್ದು, ಸಾಕಷ್ಟು ಪ್ರಕರಣಗಳ ಪತ್ತೆಗೆ ಸಹಕಾರವಾಗಿತ್ತು. ಆದರೆ, ಇತ್ತೀಚೆಗೆ ಸಿಸಿ ಕ್ಯಾಮರಾಗಳು ಹಾಳಾಗಿದ್ದು, ಪುನ@ ಅಳವಡಿಸಿ ನಿರ್ವಹಿಸಬೇಕಿದೆ ಎಂದರು.
ನಗರಸಭೆ ಮಾಜಿ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಸದಸ್ಯರಾದ ಶಿವಕುಮಾರ್, ಸುನೀಲ್ಮೂಡ್, ಗಂಗಾಧರ್ರಾವ್, ಅಂಜನಮೂರ್ತಿ, ಅಂಜಿನಪ್ಪ, ಚೇತನ್, ಭಾಗ್ಯಮ್ಮ ನರಸಿಂಹಮೂರ್ತಿ, ಲೋಲಾ ಗಂಗಾಧರ್, ಸುಜಾತಾ ಮುನಿಯಪ್ಪ, ರಾಜಮ್ಮಪಿಳ್ಳಪ್ಪ, ಸುಧಾ ಕೃಷ್ಣಪ್ಪ, ಪುಷ್ಪಲತಾ ಮಾರೇಗೌಡ, ಹೆಚ್ಚುವರಿ ಸದಸ್ಯ ಕೃಪಾನಂದ್, ಮುನಿರಾಜು, ಅಂಜನಮೂರ್ತಿ, ರಾಮಮೂರ್ತಿ, ಪೌರಾಯುಕ್ತ ಗಂಗಾಧರ್, ವ್ಯವಸ್ಥಾಪಕ ಮುಮ್ತಾಜ್, ಆರೋಗ್ಯ ನಿರೀಕ್ಷಕ ಉಮೇಶ್, ರವಿಕುಮಾರ್ ಇದ್ದರು.
ಕರ ವಸೂಲಿ ಜರೂರಾಗಲಿ : ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅಶಿಸ್ತು ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಜತೆಗೆ ಕಳೆದ ಬಾರಿ ಶೇ.96 ಕಂದಾಯ ಸಂಗ್ರಹ ಮಾಡಲಾಗಿತ್ತು. ಈ ಬಾರಿ ವಿಶೇಷವಾಗಿ ಅತಿಹೆಚ್ಚು ಕಂದಾಯ ಸಂಗ್ರಹ ಮಾಡುವಂತೆ ಅಧಿಕಾರಿಗಳಿಗೆ ಗುರಿ ನೀಡಲಾಗಿದ್ದು, ಮನೆಗೆ ಮನೆಗೆ ಭೇಟಿ ನೀಡಿ ಕಂದಾಯ ಪಾವತಿಸುವಂತೆ ಜನರಲ್ಲಿ ಮನವರಿಕೆ ಮಾಡುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ನಗರಸಭೆ ಅಧ್ಯಕ್ಷ ಎನ್.ಗಣೇಶ್ ತಿಳಿಸಿದರು.
ಸದಸ್ಯರ ಆರೋಪ : ನಗರಸಭೆ ವ್ಯಾಪ್ತಿಯ ಅಧಿಕಾರಿಗಳು ಆಯ್ದ ವಾರ್ಡ್ಗಳಲ್ಲಿ ನಾಮಫಲಕ ಅಳವಡಿಕೆ ಮಾಡಿದ್ದು ಬೇಸರದ ಸಂಗತಿ. ಬಹುತೇಕ ಕಡೆ ಸದಸ್ಯರ ನಾಮಫಲಕ ಆಳವಡಿಕೆ ಮಾಡದೇ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ನಾಮನಿರ್ದೇಶಿತ ಸದಸ್ಯ ಕೃಪಾನಂದ್ ಆರೋಪ ಮಾಡಿದರು.
ಪುಂಡರ ಹಾವಳಿಗೆ ಬ್ರೇಕ್ ಹಾಕಿ : ನಗರದಲ್ಲಿ ಇತ್ತೀಚಿಗೆ ಕಳವು ಪ್ರಕರಣ ಹೆಚ್ಚಳ, ಕೆರೆ ಅಂಗಳದಲ್ಲಿ ಗಾಂಜಾ ಸೇವನೆ ಮತ್ತು ಪುಂಡರಹಾವಳಿ ಇದೆ. ಶಿಕ್ಷಣಕ್ಕಾಗಿ ಹೊರ ರಾಜ್ಯಗಳಿಂದ ಬಂದಿರುವ ಯುವಕರು ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ.ನಗರದ ವಿವಿಧೆಡೆ ಅಕ್ರಮ ಪಿಜಿ ಸೆಂಟರ್ಗಳು ತಲೆ ಎತ್ತಿವೆ. ಇಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಕ್ರಮಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯರು ಮನವಿ ಮಾಡಿದರು.
ಚರ್ಚೆಗೊಳಪಟ್ಟ ವಿಷಯಗಳು
*2026&27ನೇ ಸಾಲಿಗೆ ಡಾಟಾ ಎಂಟ್ರಿ ಆಪರೇಟರ್ ನೇಮಕಕ್ಕೆ ಹೊಸ ಟೆಂಡರ್ ಕರೆಯುವುದು.
*ಹೊಸದಾಗಿ ಕೊರೆದ ಬೋರ್ವೆಲ್ಗೆ ವಿದ್ಯುತ್ ಸಂಪರ್ಕ, ಟ್ರಾನ್ಸ್ ಫಾರ್ಮರ್ ಅಳವಡಿಕೆ.
*ನಗರಸಭೆ ಕಟ್ಟಡ ನಿರ್ಮಾಣಕ್ಕೆ 4.36ಕೋಟಿ ಅನುದಾನ ಮೀಸಲಿಡುವುದು.
*ಗೋವಿವೆಂಕಟೇಶ್ವರ ಕಲ್ಯಾಣ ಮಠ ಹಾಗೂ ಬಸವನಹಳ್ಳಿ ರಸ್ತೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, ಬಿನ್ನಮಂಗಲ ಪ್ರದೇಶದಲ್ಲಿ ಫುಡ್ ಕೋರ್ಟ್ ನಿರ್ಮಾಣ.
*ನಗರದಲ್ಲಿ ಕನ್ಸ್ಟ್ರಕ್ಷನ್ ಮತ್ತು ಡೆಮಾಲಿಷನ್ ತ್ಯಾಜ್ಯ ಸಂಸ್ಕರಣ ಟಕ ನಿರ್ಮಾಣ ಸೇರಿ ಅನೇಕ ವಿಷಯಗಳು ಚರ್ಚೆಗೊಳಪಟ್ಟವು.