- ಬಿಎಂಟಿಸಿಗೆ 4,500 ಇವಿ ಬಸ್:
- 3,800 ಬಸ್‌ಗಳು 12 ಮೀಟರ್ ಉದ್ದ, 900 ಬಸ್‌ಗಳು 9 ಮೀಟರ್ ಉದ್ದದವು
ಇಂಧನ ದರ ಏರಿಕೆ ಹಾಗೂ ಸಾರಿಗೆ ನಿಗಮಗಳ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲು ಚಿಂತನೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಸೀಮಿತ ಪ್ರಮಾಣದಲ್ಲಿ ಪರಿಷ್ಕರಿಸುವುದು ಸವಾಲಾಗಿದೆ. ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಮಿತಿ ವರದಿ ಸಲ್ಲಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ದರ ಪರಿಷ್ಕರಣೆಯಿಂದ ಉಂಟಾಗುವ ಹೆಚ್ಚುವರಿ ಹೊರೆಯನ್ನು ಸರ್ಕಾರವೇ ಭಾಗಶಃ ಭರಿಸುವ ಮೂಲಕ ಪ್ರಯಾಣಿಕರ ಮೇಲಿನ ಹೊರೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಿಎಂಟಿಸಿಗೆ 4,500 ಇವಿ ಬಸ್:
ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬಿಎಂಟಿಸಿಗೆ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಬೈರತಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಯೋಜನೆ ಅಡಿಯಲ್ಲಿ ಈ ಬಸ್‌ಗಳನ್ನು ಪೂರೈಕೆ ಮಾಡಲಾಗುತ್ತದೆ. ಯೋಜನೆಗಾಗಿ ರಾಜ್ಯ ಸರ್ಕಾರ ವರ್ಷಕ್ಕೆ ಸುಮಾರು 600 ಕೋಟಿ ರೂ. ವೆಚ್ಚ ಮಾಡಲಿದ್ದು, 20 ವರ್ಷಗಳ ಅವಧಿಯಲ್ಲಿ ಸುಮಾರು 12 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದರು.
ಒಟ್ಟು 4,500 ಬಸ್‌ಗಳಲ್ಲಿ 3,800 ಬಸ್‌ಗಳು 12 ಮೀಟರ್ ಉದ್ದ, 900 ಬಸ್‌ಗಳು 9 ಮೀಟರ್ ಉದ್ದದವು ಹಾಗೂ 400 ಬಸ್‌ಗಳು ಹವಾನಿಯಂತ್ರಿತ (ಎಸಿ) ಆಗಿರಲಿವೆ. ವಾಹನ ತಯಾರಿಕಾ ಸಂಸ್ಥೆಗಳು ಹಂತಹಂತವಾಗಿ ಬಸ್‌ಗಳನ್ನು ಪೂರೈಸಲಿದ್ದು, ಅವುಗಳನ್ನು ಕ್ರಮೇಣ ಬೆಂಗಳೂರಿನ ರಸ್ತೆಗಿಳಿಸಲಾಗುತ್ತದೆ. ಇದರಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದರೊಂದಿಗೆ ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ವಿಸ್ತರಣೆಯಾಗಲಿದೆ ಎಂದರು.
ರಾಜ್ಯದ ಬಸ್ ಡಿಪೋಗಳು ಹಾಗೂ ಬಸ್ ನಿಲ್ದಾಣಗಳ ನಿರ್ಮಾಣ ಮತ್ತು ಉನ್ನತೀಕರಣಕ್ಕಾಗಿ ಕೇಂದ್ರ ಸರ್ಕಾರದಿಂದ 2,000 ಕೋಟಿ ರೂ. ಸಾಲ ಪಡೆಯಲು ನಿರ್ಧರಿಸಲಾಗಿದೆ. ಈ ಅನುದಾನವನ್ನು ರಾಜ್ಯದಾದ್ಯಂತ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುವುದು ಎಂದರು.
ಶಕ್ತಿ ಸ್ಮಾರ್ಟ್ ಕಾರ್ಡ್*ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಸೌಲಭ್ಯ ಪಡೆಯುತ್ತಿರುವ ಮಹಿಳೆಯರಿಗೆ ಮೊದಲ ಹಂತದಲ್ಲಿ ಒಂದು ಕೋಟಿಗೂ ಹೆಚ್ಚು ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗುವುದು. ಇದಕ್ಕಾಗಿ ಸುಮಾರು 250 ಕೋಟಿ ರೂ. ವೆಚ್ಚವಾಗಲಿದ್ದು, ಶೀಘ್ರದಲ್ಲೇ ವಿತರಣಾ ಪ್ರಕ್ರಿಯೆ ಆರಂಭವಾಗಲಿದೆ.