ಬೆಂಗಳೂರು: ಆನ್ಲೈನ್ ಬೆಟ್ಟಿಂಗ್ ದಂಧೆ ಹಾಗೂ ಜೂಜಾಟದ ಮೂಲಕ ಅಕ್ರಮವಾಗಿ ಹಣ ಸಂಪಾದಿಸಿ, ಅದನ್ನು ವಿವಿಧ ಹಣಕಾಸು ವಹಿವಾಟುಗಳ ಮೂಲಕ ಅಕ್ರಮ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಮತ್ತು ಇತರರಿಗೆ ಸೇರಿ 23.35 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 13.76 ಕೋಟಿ ಮೌಲ್ಯದ ಚರಾಸ್ತಿ ಮತ್ತು 9.58 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿರುವ ಅಧಿಕಾರಿಗಳು, ವೀರೇಂದ್ರ ಪಪ್ಪಿ, ಗುಲ್ಶನ್ ಖಟ್ಟರ್ ಮತ್ತು ನೇಹಾ ಟಂಡನ್ ಅವರ ವಶದಲ್ಲಿದ್ದ ಅಕ್ರಮ ಹಣದ ಮೌಲ್ಯಕ್ಕೆ ಸಮಾನವಾದ ಆಸ್ತಿಗಳನ್ನು ಗುರುತಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇ.ಡಿ. ತಿಳಿಸಿದೆ.
2,300 ಕೋಟಿಗೂ ಅಧಿಕ ಅಕ್ರಮ ಹಣದ ಜಾಲ:
ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಾಟದ ಆ್ಯಪ್ಗಳ ಮೂಲಕ ವಂಚನೆ, ಕ್ರಿಮಿನಲ್ ಸಂಚು ಹಾಗೂ ಅಮಾಯಕರಿಂದ ಸುಲಿಗೆ ನಡೆಸಿರುವ ಆರೋಪದ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಎಫ್ಐಆರ್ಗಳ ಆಧಾರದ ಮೇಲೆ ಇ.ಡಿ. ತನಿಖೆ ಆರಂಭಿಸಿದೆ.
ತನಿಖೆ ವೇಳೆ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದ ಬೆಟ್ಟಿಂಗ್ ವೆಬ್ಸೈಟ್ಗಳು, ಶೆಲ್ ಕಂಪನಿಗಳು ಮತ್ತು ಇತರರ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಹಣ ವರ್ಗಾವಣೆ ಮಾಡಲಾಗಿತ್ತು. ಈ ಜಾಲವು ಅಂದಾಜು 2,300 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಕೆ.ಸಿ.ವೀರೇಂದ್ರ ಮತ್ತು ಅವರ ಸಹಚರರು ನಿಯಂತ್ರಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಇ.ಡಿ. ಹೇಳಿದೆ.
ಅಲ್ಲದೇ ಇಷ್ಟೊಂದು ದೊಡ್ಡ ಮಟ್ಟದ ಮೊತ್ತವನ್ನು ಹಲವು ಬ್ಯಾಂಕ್ ಖಾತೆ, ಹವಾಲಾ ಮಾರ್ಗಗಳು ಮತ್ತು ವಿದೇಶಿ ಸಂಸ್ಥೆಗಳ ಮೂಲಕ ವರ್ಗಾಯಿಸಿ, ಅದರ ಮೂಲವನ್ನು ಮರೆಮಾಚಲು ಪ್ರಯತ್ನಿಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕಳೆದ ಜನವರಿ 29ರಂದು ಇ.ಡಿ ನೀಡಿರುವ ಪ್ರಕಟಣೆಯಲ್ಲಿ, ವೀರೇಂದ್ರ ಪಪ್ಪಿಗೆ ಸೇರಿ 33 ಕೋಟಿ ಮೌಲ್ಯದ ಆಸ್ತಿ ಜಪ್ತಿ, ಹಲವು ನಕಲಿ ಬ್ಯಾಂಕ್ ಖಾತೆಗಳಿಗೆ ಕೋಟ್ಯಂತರ ರೂ. ವರ್ಗಾವಣೆ ಮಾಡಿರುವುದು ಪತ್ತೆಯಾಗಿತ್ತು. ಸಿಮ್ಟೆಕ್ ಐಟಿ ಸೊಲ್ಯೂಷನ್ಸ್ ಪ್ರೈ.ಲಿ.ನ ನಿರ್ದೇಶಕಿಯಾಗಿರುವ ನೇಹಾ ಟಂಡನ್ ಅವರು ಸಂಸ್ಥೆಯ ನಿರ್ವಹಣೆಯಲ್ಲಿ ಸಕ್ರಿಯ ಪಾತ್ರ ವಹಿಸಿರಲಿಲ್ಲ. ಅವರ ಪತಿ ಗುಲ್ಶನ್ ಖಟ್ಟರ್ ಸಂಸ್ಥೆಯ ವ್ಯವಹಾರ ನಿರ್ವಹಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಇ.ಡಿ. ಹೇಳಿದೆ.
60ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ
ಬೆಟ್ಟಿಂಗ್ ಪ್ರಕರಣದ ತನಿಖೆಯ ಭಾಗವಾಗಿ ಇಡಿ ಅಧಿಕಾರಿಗಳು ವಿವಿಧ ರಾಜ್ಯಗಳ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಭಾರೀ ಪ್ರಮಾಣದ ನಗದು, ಚಿನ್ನದ ಗಟ್ಟಿಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳು, ನಕಲಿ ಬ್ಯಾಂಕ್ ಖಾತೆಗಳಲ್ಲಿದ್ದ ಹಣ, ವಾಹನಗಳು, ಡಿಜಿಟಲ್ ಸಾಧನಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 2025ರ ಅಕ್ಟೋಬರ್ 18ರಂದು ಪ್ರಾಸಿಕ್ಯೂಷನ್ ದೂರು ಸಲ್ಲಿಸಲಾಗಿತ್ತು. ದೂರು ಪರಿಗಣಿಸಿದ ಪಿಎಂಎಲ್ಎ ವಿಶೇಷ ನ್ಯಾಯಾಲಯವು 2026ರ ಮೇ 4ರಂದು ಪ್ರಕರಣದಲ್ಲಿ ವಿಚಾರಣೆ ಮುಂದುವರಿಸಲು ಕಾನೂನು ಪ್ರಕ್ರಿಯೆಯ ಭಾಗವಾಗಿ ಪರಿಗಣನೆಗೆ ತೆಗೆದುಕೊಂಡಿತ್ತು.
ಇದಕ್ಕೂ ಮೊದಲು ಇ.ಡಿ. 177.30 ಕೋಟಿ ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು. ಇದೀಗ ಮತ್ತೆ ಹೆಚ್ಚುವರಿಯಾಗಿ 23.35 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ ಜಪ್ತಿ, ವಶಪಡಿಸಿಕೊಂಡಿರುವುದು, ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿರುವುದು ಸೆರಿ ಒಟ್ಟು ಆಸ್ತಿಗಳ ಒಟ್ಟು ಮೌಲ್ಯ 343 ಕೋಟಿ ಮೀರಿದೆ ಎಂದು ಇ.ಡಿ. ತಿಳಿಸಿದೆ.