- ಕುಟುಂಬದ ಆಸ್ತಿ ವಿಭಾಗದ ದಾವೆ ಸಿವಿಲ್ ಕೋರ್ಟ್ನಲ್ಲಿ ಬಾಕಿ ಇದೆ
- ಅದೇ ವಿಚಾರಕ್ಕೆ ಕ್ರಿಮಿನಲ್ ಕೇಸ್ ಹಾಕಿದ್ರೆ ಕಾನೂನು ದುರುಪಯೋಗ
- ಆಸ್ತಿ ದಕ್ಕಿಸಿಕೊಳ್ಳುವುದಕ್ಕಾಗಿ ಕ್ರಿಮಿನಲ್ ಪ್ರಕ್ರಿಯೆ ಅಸ್ತ್ರವಾಗಲು ಬಿಡಲ್ಲ
- ಆಸ್ತಿಗಾಗಿನ ಕುಟುಂಬ ಕಲಹಕ್ಕೆ ಕ್ರಿಮಿನಲ್ ಬಣ್ಣ ಬಳಿಯುವುದ ಸಹಿಸಲ್ಲ
ಬೆಂಗಳೂರು: ಕೋಟ್ಯಂತರ ರೂ. ಮೌಲ್ಯದ ಆಸ್ತಿ ದಕ್ಕಿಸಿಕೊಳ್ಳಲು 73 ವರ್ಷದ ತಾಯಿ ಹಾಗೂ ಅಕ್ಕನ ವಿರುದ್ಧವೇ ಸಿವಿಲ್, ಕ್ರಿಮಿನಲ್ ದಾವೆ ಹೂಡಿದ್ದಲ್ಲದೆ ಪೊಲೀಸರು ಮತ್ತು ಖಾಸಗಿ ವ್ಯಕ್ತಿಗಳಿಂದ ಬೆದರಿಕೆ ಹಾಕಿಸಿದ್ದ ಮಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ದುರುದ್ದೇಶಪೂರಿತವಾಗಿ ಪ್ರಕರಣ ದಾಖಲಿಸಿ ಕಿರುಕುಳ ನೀಡಿರುವ ಕಾರಣ ಮಗಳ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಲು ವೃದ್ಧ ತಾಯಿಗೆ ಬಲವಾದ ಕಾನೂನಾತ್ಮಕ ಆಧಾರಗಳಿವೆ ಎಂದು ಎಚ್ಚರಿಸಿದೆ.
ಕುಟುಂಬದ ಆಸ್ತಿ ವಿಭಾಗಕ್ಕೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಬಾಕಿ ಇರುವಾಗ, ಅದೇ ವಿಚಾರಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಒತ್ತಡ ಹೇರುವುದು ಮತ್ತು ಹೆದರಿಸುವುದು ಕಾನೂನಿನ ದುರುಪಯೋಗ ಎಂದಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಂಜಯನಗರ ಪೊಲೀಸ್ ಠಾಣೆಯಲ್ಲಿ ಮಗಳು ದಾಖಲಿಸಿದ್ದ ಪ್ರಕರಣ ರದ್ದುಪಡಿಸಿದೆ.
ವೃದ್ಧ ತಾಯಿಯನ್ನು ಪೊಲೀಸರು ಮತ್ತು ಖಾಸಗಿ ವ್ಯಕ್ತಿಗಳ ಮೂಲಕ ಬೆದರಿಸಲಾಗಿದೆ. ಒತ್ತಡ ಹೇರುವ ಮೂಲಕ ಆಸ್ತಿ ದಕ್ಕಿಸಿಕೊಳ್ಳಲು ಕ್ರಿಮಿನಲ್ ಪ್ರಕ್ರಿಯೆಯನ್ನು ಅಸ್ತ್ರವಾಗಿ ಬಳಸಲು ಬಿಡುವುದಿಲ್ಲ. ಒಂದೇ ವಿಷಯದ ಮೇಲೆ ಸಿವಿಲ್ ದಾವೆ ಹೂಡಿ, ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಿರುವುದು ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗ. ಆಸ್ತಿಗಾಗಿ ನಡೆದ ಕುಟುಂಬ ಕಲಹಕ್ಕೆ ಕ್ರಿಮಿನಲ್ ಬಣ್ಣ ಬಳಿಯುವುದನ್ನು ಸಹಿಸಲಾಗದು ಎಂದು ನ್ಯಾಯಪೀಠ ಹೇಳಿದೆ.
ವಿದೇಶಿ ಮಗಳಿಂದ ದಾವೆ
ದೌರ್ಜನ್ಯಕ್ಕೀಡಾದ ವೃದ್ಧೆಯ ಕುಟುಂಬ ಬೆಂಗಳೂರಿನ ಸಂಜಯನಗರದಲ್ಲಿ ವಾಸವಿತ್ತು. ಮನೆ ಯಜಮಾನ ನಿಧನರಾದ ನಂತರ ಅವರ ಆಸ್ತಿ ವಿಚಾರಕ್ಕಾಗಿ ಪತ್ನಿ ಮತ್ತು ಇಬ್ಬರು ಮಕ್ಕಳ ನಡುವೆ ವಿವಾದ ಉಂಟಾಗಿದೆ. 2024ರಲ್ಲಿ ಬೆಂಗಳೂರಿನ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸಿಂಗಾಪುರದಲ್ಲಿ ನೆಲೆಸಿರುವ ಕಿರಿಯ ಪುತ್ರಿ, ತನ್ನ ತಂದೆಯ ಆಸ್ತಿಯಲ್ಲಿ ಮೂರನೇ ಒಂದರಷ್ಟು ಪಾಲು ಕೋರಿದ್ದರು. ಈ ದಾವೆ ಬಾಕಿ ಇರುವಂತೆಯೇ 2025ರ ಅಕ್ಟೋಬರ್ನಲ್ಲಿ ತನ್ನ ತಾಯಿ ಮತ್ತು ಅಕ್ಕನ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಕಲಿ ದಾಖಲೆ ಬಳಸಿ ತನ್ನ ತಂದೆಯ ಹೆಸರಿನಲ್ಲಿದ್ದ ಖಾತೆಯನ್ನು ತಾಯಿಯ ಹೆಸರಿಗೆ ಬದಲಿಸಲಾಗಿದೆ ಎಂದು ಆರೋಪಿಸಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ವೃದ್ಧ ತಾಯಿ ಮತ್ತು ಅವರ ಹಿರಿಯ ಮಗಳು (ಅರ್ಜಿದಾರರ ಅಕ್ಕ) ಹೈಕೋರ್ಟ್ ಮೆಟ್ಟಿಲೇರಿದ್ದರು.
ℹ️ ರೌಡಿಗಳಿಂದ ಬೆದರಿಕೆ
ರೌಡಿಗಳಂತೆ ಕಾಣುತ್ತಿದ್ದ ನಾಲ್ವರು ವ್ಯಕ್ತಿಗಳು 2025ರ ಅ. 22ರಂದು ಮಧ್ಯಾಹ್ನ 2.30ಕ್ಕೆ ಮನೆಗೆ ಪ್ರವೇಶಿಸಿ ಬೆದರಿಕೆ ಹಾಕಿದ್ದಾರೆ. ಕಾಂಪೌಂಡ್ ಗೋಡೆಯ ಮೇಲೆ ಸಿವಿಲ್ ಪ್ರಕರಣದ ಸಂಖ್ಯೆ ಬರೆದು, ನಿಮ್ಮ ಕಿರಿಮಗಳು ಇದನ್ನು ಬರೆಯಲು ಹೇಳಿದ್ದಾರೆ. ನೀವು ಅಡ್ಡ ಬಂದರೆ ನಿಮ್ಮನ್ನು ಮನೆಯಿಂದ ಹೊರಹಾಕಲೂ ಹೇಳಿದ್ದಾರೆ ಎಂದು ಬೆದರಿಸಿದ್ದಾರೆ. ಅಲ್ಲದೆ, ಅದೇ ದಿನ ಸಂಜೆ 6 ಗಂಟೆಗೆ ಕಿರಿಮಗಳು, ಅವಳ ಪತಿ ಮತ್ತು ಸಂಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಮತ್ತು 4ರಿಂದ 8 ಮಂದಿ ರೌಡಿಗಳಂತಹ ವ್ಯಕ್ತಿಗಳು ಮನೆಗೆ ಅತಿಕ್ರಮಣ ಮಾಡಿ ಬೆದರಿಕೆ ಹಾಕಿದ್ದಾರೆ. ಒಂಟಿಯಾಗಿ ವಾಸಿಸುತ್ತಿರುವ ತನಗೆ ಜೀವ ಬೆದರಿಕೆಯಿದ್ದು, ಮಗಳು ರೌಡಿಗಳ ಮೂಲಕ ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ದಾಖಲೆಗಳೊಂದಿಗೆ ಅದೇ ದಿನ ನಗರ ಪೊಲೀಸ್ ಕಮಿಷನರ್ಗೆ ತಾಯಿ ದೂರು ಸಲ್ಲಿಸಿದ್ದರು. ಈ ಅಂಶಗಳನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
ಮಗಳ ವಿರುದ್ಧ ಕೇಸ್ ಹಾಕಬಹುದು
ಯಾವುದೇ ಆಧಾರ ಅಥವಾ ಸಕಾರಣವಿಲ್ಲದೆ, ಕೇವಲ ದುರುದ್ದೇಶದಿಂದ, ಎದುರಾಳಿಗೆ ಕಿರುಕುಳ ನೀಡಲು ಅಥವಾ ಅವರ ಮಾನಹಾನಿ ಮಾಡಲು ಕ್ರಿಮಿನಲ್ ಪ್ರಕರಣ ದಾಖಲಿಸಿದರೆ, ಅದನ್ನು ದುರುದ್ದೇಶಪೂರಿತ ಪ್ರಕರಣ ಎನ್ನಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಸಂಕಷ್ಟಕ್ಕೊಳಗಾದ ವ್ಯಕ್ತಿಯು ತನ್ನ ಮೇಲೆ ಸುಳ್ಳು ಕೇಸ್ ಹಾಕಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದವರ ವಿರುದ್ಧ ಪ್ರತಿಯಾಗಿ ದಂಡನೆ ಮತ್ತು ಪರಿಹಾರ ಕೋರಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆ ಹೂಡಲು ಕಾನೂನಿನಲ್ಲಿ ಅವಕಾಶವಿದೆ. ಈ ಪ್ರಕರಣದಲ್ಲಿ ಆ ಹಕ್ಕು ಚಲಾಯಿಸಲು ತಾಯಿಗೆ ಮುಕ್ತ ಅವಕಾಶವಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.