GBA 
ರಾಜ್ಯ

‘ಎ’ ಖಾತಾಗೆ ಆಸ್ತಿ ಮಾಲೀಕರ ನಿರಾಸಕ್ತಿ\

ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಆಸ್ತಿಗಳನ್ನು ಬಿ-ಖಾತಾ ಯಿಂದ ಎ-ಖಾತಾಗೆ ಪರಿವರ್ತನೆ ಅಭಿಯಾನಕ್ಕೆ ಸಾರ್ವಜನಿಕರು ಆಸಕ್ತಿ ತೋರಿಸಿಲ್ಲ. 100 ದಿನಗಳ ಅಭಿಯಾನಕ್ಕೆ 2025ರ ಅ. 15ರಿಂದ ಚಾಲನೆ ನೀಡಲಾಗಿತ್ತು. ಈ ವೇಳೆ 8,308 ಅರ್ಜಿಗಳು ಸ್ವೀಕೃತವಾಗಿದ್ದು, 818 ಆಸ್ತಿಗಳಿಗೆ ಎ-ಖಾತಾಗಳಾಗಿ ಅನುಮೋದನೆ ನೀಡಲಾಗಿದೆ ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಸ್ತಿ ತೆರಿಗೆ ತಂತ್ರಾಂಶದ ಮಾಹಿತಿಯಂತೆ ಜಿಬಿಎ ವ್ಯಾಪ್ತಿಯಲ್ಲಿ 8,25,150 ಸ್ವತ್ತುಗಳು ಬಿ-ಖಾತಾ ಪಡೆದುಕೊಂಡಿವೆ. ಆದರೂ, 8,308 ಮಂದಿ ಮಾತ್ರ ಎ-ಖಾತಾ ಕೋರಿ ಅರ್ಜಿ ಸಲ್ಲಿಸಿರುವುದನ್ನು ನೋಡಿದರೆ ಸಾರ್ವಜನಿಕರ ಹಿಂದೇಟಿಗೆ ಗೊಂದಲವೇ ಪ್ರಮುಖವಾಗಿದೆ. ಈ ಯೋಜನೆ ಪ್ರಕಾರ ಪ್ರಸ್ತುತ ಕೇವಲ ಸೈಟಿನ ಜಾಗಕ್ಕೆ ಎ-ಖಾತಾ ನೀಡಲಾಗುತ್ತದೆ ಹೊರತು ಕಟ್ಟಡಕ್ಕೆ ನೀಡುವುದಿಲ್ಲ. ಭವಿಷ್ಯದಲ್ಲಿ ಕಟ್ಟಡಕ್ಕೂ ಪ್ರತ್ಯೇಕ ಖಾತಾ ಮಾಡಿಸಿಕೊಳ್ಳಬೇಕಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಾರ್ಗಸೂಚಿ ದರದಲ್ಲಿ ಶೇ.5 ಶುಲ್ಕ ಪಾವತಿ ಮಾಡುವ ಷರತ್ತು ಆಸ್ತಿ ಮಾಲೀಕರಿಗೆ ದೊಡ್ಡ ಹೊರೆಯಾಗಿದೆ. ಅಕ್ರಮ-ಸಕ್ರಮ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿ ಇರುವ ಕಾರಣಕ್ಕೆ ಜನರು ಗೊಂದಲಕ್ಕೆ ಒಳಗಾಗಿ ಅರ್ಜಿ ಸಲ್ಲಿಸುವ ಗೋಜಿಗೆ ಹೋಗಿಲ್ಲ.
ಖಾತಾ ಪರಿವರ್ತನೆ ಮಾಡಿಕೊಂಡರೆ ಪ್ರಮುಖವಾಗಿ ಆಸ್ತಿ ಮೇಲೆ ಸಾಲಸೌಭ್ಯಕ್ಕೆ ಹೋದಾಗ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಲಿದೆ. ಜತೆಗೆ ಆಸ್ತಿ ಮಾರಾಟದ ವೇಳೆ ಹೆಚ್ಚಿನ ಮೌಲ್ಯಕ್ಕೆ ಬಿಕರಿ ಮಾಡಲು ಅವಕಾಶವಿದೆ. ಇದನ್ನು ಹೊರತು ಮತ್ಯಾವುದೇ ಅನುಕೂಲಗಳು ಕಾಣುತ್ತಿಲ್ಲ. ಆದರಿಂದ ಈಗಾಗಲೇ ಸ್ವಂತ ಮನೆ, ಕಟ್ಟಡ ಕಟ್ಟಿಕೊಂಡು ಮಾರಾಟ ಮತ್ತು ಸಾಲಸೌಲಭ್ಯದಿಂದ ದೂರ ಇರುವವರು ಈ ಅಭಿಯಾನದಿಂದ ದೂರ ಉಳಿದಿದ್ದಾರೆ ಎಂಬುದು ಜಿಬಿಎ ಅಧಿಕಾರಿಗಳ ವಾದವಾಗಿದೆ.
ಮತ್ತೊಂದು ಕಂಟಕ
ಬಿ-ಖಾತಾಯಿಂದ ಎ-ಖಾತಾಗೆ ಆಸ್ತಿ ಪರಿವರ್ತನೆ ಮಾಡಿಕೊಳ್ಳಬೇಕಾದರೆ ಮುಖ್ಯವಾಗಿ ಇ-ಖಾತಾ ಕಡ್ಡಾಯವಾಗಿದೆ. ಆದರೆ, ಜಿಬಿಎ ಅಧಿಕಾರಿಗಳು ಇ-ಖಾತಾ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಪರಿಣಾಮ ಎ-ಖಾತಾ ಅಭಿಯಾನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇಲ್ಲಿಯವರೆಗೂ ಇ-ಆಸ್ತಿ ತಂತ್ರಾಂಶದಲ್ಲಿ ಅಡ್ಡಿಯಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಜಿಬಿಎ ಅಧಿಕಾರಿಗಳು ಮುಂದಾಗಿಲ್ಲ.
ಎ-ಖಾತಾ ಪಡೆದ ಆಸ್ತಿಗಳ ಸಂಖ್ಯೆ
------------------------------------------------------------
ಪಾಲಿಕೆ ಬಿ ಖಾತಾ ಆಸ್ತಿಗಳು ಎ-ಖಾತಾಗೆ ಅರ್ಜಿ ಎ-ಖಾತಾ
--------------------------------------------------------------
ಕೇಂದ್ರ 20,428 46 00
ಪೂರ್ವ 24,53,368 1,720 192
ಪಶ್ಚಿಮ 1,99,577 2,115 181
ಉತ್ತರ 1,68,742 2,770 221
ದಕ್ಷಿಣ 1,91,035 1,657 224
----------------------------------------------------------
ಒಟ್ಟು 8,25,150 8,308 818