ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಬಡ್ತಿ ಕೌನ್ಸೆಲಿಂಗ್ 
ರಾಜ್ಯ

ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಬಡ್ತಿ: ಜ.1ರಿಂದ ಕೌನ್ಸೆಲಿಂಗ್ ಆರಂಭ

ಪ್ರಮುಖ ಮುಖ್ಯಾಂಶಗಳು

  • ರಾಜ್ಯಾದ್ಯಂತ ಏಕಕಾಲಕ್ಕೆ ಕೌನ್ಸೆಲಿಂಗ್ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಸೂಚನೆ
  • ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮುಖ್ಯ ಶಿಕ್ಷಕರ ಬಡ್ತಿ ಪ್ರಕ್ರಿಯೆಗೆ ಮರು ಚಾಲನೆ, 2000ಕ್ಕೂ ಹೆಚ್ಚು ಮುಖ್ಯ ಶಿಕ್ಷಕರಿಗೆ ಬಡ್ತಿ ಭಾಗ್ಯ ಸಾಧ್ಯತೆ
  • ಜ.29ರಂದು 1:1 ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿ ಜ.31ರಂದು ಕೌನ್ಸೆಲಿಂಗ್ ಮೂಲಕ ಖಾಲಿ ಇರುವ ಹಿರಿಯ ಮುಖ್ಯ ಶಿಕ್ಷಕ ಹುದ್ದೆಗಳಿಗೆ ಬಡ್ತಿ ನೀಡಬೇಕು
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಜ್ಯೇಷ್ಠತಾ ಪಟ್ಟಿಗೆ ಅನುಗುಣವಾಗಿ ಖಾಲಿ ಇರುವ ಹಿರಿಯ ಮುಖ್ಯ ಶಿಕ್ಷಕ ಹುದ್ದೆಗಳಿಗೆ ಬಡ್ತಿ ನೀಡಲು ರಾಜ್ಯಾದ್ಯಂತ ಏಕಕಾಲಕ್ಕೆ ಕೌನ್ಸೆಲಿಂಗ್ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಪ್ರಯತ್ನದ ಫಲವಾಗಿ ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮುಖ್ಯ ಶಿಕ್ಷಕರ ಬಡ್ತಿ ಪ್ರಕ್ರಿಯೆಗೆ ಮರು ಚಾಲನೆ ನೀಡಲು ಇಲಾಖೆ ಸ್ಪಂದಿಸಿದ್ದು, ಸುಮಾರು 2000ಕ್ಕೂ ಹೆಚ್ಚು ಮುಖ್ಯ ಶಿಕ್ಷಕರಿಗೆ ಬಡ್ತಿ ಭಾಗ್ಯ ಸಿಗುವ ಸಾಧ್ಯತೆ ಇದೆ.
ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಗೆ 2026ರ ಜ.1ರಿಂದ ಏಕಕಾಲಕ್ಕೆ ಕೌನ್ಸೆಲಿಂಗ್ ಆರಂಭಿಸಬೇಕು. ಜ.1ರಂದು ಜಿಲ್ಲೆಯಲ್ಲಿ ಮುಖ್ಯ ಶಿಕ್ಷಕರ ಮತ್ತು ಹಿರಿಯ ಮುಖ್ಯ ಶಿಕ್ಷಕರ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಪ್ರಕಟಿಸಬೇಕು. ಈ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಜ.8ರವರೆಗೆ ಅವಕಾಶ ನೀಡಬೇಕು. ಜ.2ರಂದು ಜಿಲ್ಲೆಯಲ್ಲಿ ಲಭ್ಯವಿರುವ ಎ, ಬಿ ಮತ್ತು ಸಿ ವಲಯದ ಮುಖ್ಯ ಶಿಕ್ಷಕರ ಖಾಲಿ ಹುದ್ದೆಗಳನ್ನು ಪ್ರಕಟಿಸಬೇಕು. ಬಡ್ತಿ ನೀಡಿ ಸಿ ವಲಯದ ಶಾಲೆಗಳಿಗೆ ನಿಯೋಜಿಸಬೇಕಿರುವುದರಿಂದ ಅಲ್ಲಿರುವ ಮುಖ್ಯ ಶಿಕ್ಷಕರನ್ನು ಎ ಮತ್ತು ಬಿ ವಲಯಕ್ಕೆ ನಿಯಮಾನುಸಾರ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು.
ನಂತರ ಜ.21ರಂದು ಬಡ್ತಿಗೆ ಅರ್ಹರಿರುವ ಮುಖ್ಯ ಶಿಕ್ಷಕರ 1:2 ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸಿ ಆಕ್ಷೇಪಣೆಗೆ ಅವಕಾಶ ನೀಡಬೇಕು. ಆಕ್ಷೇಪಣೆಗಳನ್ನು ಬಗೆಹರಿಸಿ ಜ.29ರಂದು 1:1 ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿ ಜ.31ರಂದು ಕೌನ್ಸೆಲಿಂಗ್ ಮೂಲಕ ಖಾಲಿ ಇರುವ ಹಿರಿಯ ಮುಖ್ಯ ಶಿಕ್ಷಕ ಹುದ್ದೆಗಳಿಗೆ ಬಡ್ತಿ ನೀಡಬೇಕು ಎಂದು ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸೂರಳ್ಕರ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಅನುಸರಿಸಬೇಕಾದ ಮಾರ್ಗಸೂಚಿಗಳು

-‘ಸಿ’ ವಲಯದಲ್ಲಿನ ಶಾಲೆಗಳಲ್ಲಿ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ‘ಸಿ’ ವಲಯದಲ್ಲಿನ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಸಂಬಂಧಿಸಿದ ಶಾಲೆಗಳಲ್ಲಿ ತೆರವುಗೊಳಿಸಬೇಕಿದೆ. ಹೀಗಾಗಿ, ‘ಸಿ’ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಮುಖ್ಯ ಶಿಕ್ಷಕರನ್ನು ‘ಬಿ’ ಮತ್ತು ‘ಬಿ’ ವಲಯದ ಶಿಕ್ಷಕರನ್ನು ‘ಎ’ ವಲಯದ ಶಾಲೆಗಳಿಗೆ ಸ್ಥಳಾಂತರಿಸಬೇಕು
- ವರ್ಗಾವಣೆಯಲ್ಲಿ ಹಿರಿಯ ಮುಖ್ಯ ಶಿಕ್ಷಕರಿಗೆ ಆದ್ಯತೆ ನೀಡುವ ಜತೆಗೆ 250ಕ್ಕಿಂತ ಹೆಚ್ಚು ದಾಖಲಾತಿ ಇರುವ ಶಾಲೆಗಳಿಗೆ ಇವರ ಬಡ್ತಿಯನ್ನು ಪರಿಗಣಿಸಬೇಕು.
- ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿರುವ ಶಿಕ್ಷಕರನ್ನು ಮಾತ್ರ ಅಂಗವಿಕಲ ಮೀಸಲಾತಿಯಲ್ಲಿ ಅರ್ಹತೆ ಇದ್ದಲ್ಲಿ ಪರಿಗಣಿಸಬೇಕು. (ಅಂಗವಿಕಲ ಶಾಶ್ವತ ಪ್ರಮಾಣಪತ್ರ ಪಡೆದಿದ್ದರೂ ಸಹ ಅಂಗವಿಕಲತೆಯ ಪ್ರಮಾಣ ಮತ್ತು ವಿಧವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು.)
- ಪ್ರಸ್ತುತ ಜಾರಿಯಲ್ಲಿರುವ 100 ಬಿಂದುಗಳ ರೋಸ್ಟರ್ ವರ್ತುಲದಂತೆ ಮೀಸಲಾತಿ ಬಿಂದುವನ್ನು ಗುರುತಿಸಿ ಜಿಲ್ಲಾ ಹಂತದಲ್ಲಿ ಬಡ್ತಿ ಕೌನ್ಸೆಲಿಂಗ್‌ಗೆ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವುದು.