ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  
ರಾಜ್ಯ

ಗುತ್ತಿಗೆದಾರರ ಬಾಕಿ ತೀರಿಸುವ ಭರವಸೆ

ಬೆಂಗಳೂರು : ರಾಜ್ಯ ಗುತ್ತಿಗೆದಾರರ ಬಾಕಿ ಇರುವ ಹಣ ಬಿಡುಗಡೆ ಮತ್ತು ಇತರ ಸಮಸ್ಯೆಗಳ ಕುರಿತು ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಗೆಹರಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ವಿಧಾನಸೌಧದಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ನೇತೃತ್ವದಲ್ಲಿ ಪದಾಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಕೆಲ ಹೊತ್ತು ಗುತ್ತಿಗೆದಾರರೊಂದಿಗೆ ಚರ್ಚೆ ನಡೆಸಿ ಡಿ.ಕೆ. ಶಿವಕುಮಾರ್, ಹಣಕಾಸು ಇಲಾಖೆಯ ಅಧಿಕಾರಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸಭೆ ನಡೆಸಿ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವ ವ್ಯವಸ್ಥೆ ಮಾಡುವುದಾಗಿ ಗುತ್ತಿಗೆದಾರರಿಗೆ ಭರವಸೆ ನೀಡಿದ್ದಾರೆ ಎಂದು ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ 37 ಸಾವಿರ ಕೋಟಿ ರೂ. ಬಿಡುಗಡೆ ಆಗದೆ ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, 2017-18ರಿಂದ 2020ರ ವರೆಗೆ ಕೈಗೊಂಡ ಕಾಮಗಾರಿಗಳಿಗೆ ವ್ಯಾಟ್-ಜಿಎಸ್‌ಟಿಯಲ್ಲಿ ಶೇ.12 ವ್ಯತ್ಯಾಸದ ಶೇ.8 ಜಿಎಸ್‌ಟಿ ಹಣವನ್ನು ವಾಪಸ್ ಕೊಡಿಸುವ ಸಂಬಂಧ 7 ವರ್ಷಗಳಿಂದ ರಾಜ್ಯ ಗುತ್ತಿಗೆದಾರರ ಸಂಘವು ಸರ್ಕಾರದ ಜತೆಗೆ ಚರ್ಚೆ ನಡೆಸುತ್ತಲೇ ಇವೆ. ಆದರೆ, ಇಲ್ಲಿಯವರೆಗೂ ಆಗಿಲ್ಲ.
ಬೆಂಗಳೂರು ಮಹಾನಗರ ಪಾಲಿಕೆ ಜಿಬಿಎ ಆದ ನಂತರ ಗುತ್ತಿಗೆದಾರರಿಗೆ ಹಲವಾರು ಸಮಸ್ಯೆಗಳು ಉಂಟಾಗಿವೆ. 5 ವರ್ಷಗಳ ಹಿಂದೆ ಭದ್ರತಾ ಠೇವಣಿಯಾಗಿ ಶೇ.10 ಬಿಲ್ ಪಾವತಿ ಸಮಯದಲ್ಲಿ ಕಟಾವು ಮಾಡಿದ ಹಣವನ್ನು ಮತ್ತು ಕೆಆರ್‌ಡಿಎಲ್ ಸಂಸ್ಥೆಯಿಂದ ನಿರ್ವಹಿಸಿರುವ ಕಾಮಗಾರಿಗೆ ಶೇ.25 ಬಾಕಿ ಇರುವ ಹಣವನ್ನು ಇದುವರೆಗೂ ಪಾವತಿ ಮಾಡಿಲ್ಲ. ಜಿಬಿಎಯಲ್ಲಿ ಎಲ್ಲ ಕಾಮಗಾರಿಗಳನ್ನು ಒಟ್ಟಿಗೆ ಸೇರಿಸಿ ಪ್ಯಾಕೇಜ್ ಪದ್ಧತಿಯನ್ನು ತರಲಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮವರ್ಗದ ಗುತ್ತಿಗೆದಾರರಿಗೆ ಅನಾನುಕೂಲವಾಗಿದೆ. ಈ ಎಲ್ಲ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ಕರೆದು ಕೂಡಲೇ ಬಗೆಹರಿಸಬೇಕೆಂದು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.