ಮಾಜಿ ಸಚಿವೆ ಬಿ.ಟಿ.ಲಲಿತ್‌ನಾಯಕ್
ಬೆಂಗಳೂರು: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು ಮತದಾರರನ್ನು ಹೊರದಬ್ಬುವ ಅಸಂವಿಧಾನಿಕ ಪ್ರಕ್ರಿಯೆವಾಗಿದೆ. ಇದಕ್ಕೆ ನಮ್ಮ ವಿರೋಧ ಇದೆ ಎಂದು 15ಕ್ಕೂ ಅಧಿಕ ಪ್ರಗತಿಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಕೇಂದ್ರ ಚುನಾವಣಾ ಆಯೋಗವು ಒಬ್ಬ ಮತದಾರರ ಹೆಸರನ್ನು ತೆಗೆದುಹಾಕದೆ ಸಮರ್ಥ ಪಟ್ಟಿಯನ್ನು ಸಿದ್ಧಪಡಿಸಬೇಕು. ನಿಯಮ ಉಲ್ಲಂಘಿಸಿ ಆಯೋಗ ಎಸ್‌ಐಆರ್ ಕೈಗೆತ್ತಿಕೊಂಡಿದೆ. ಇದರಿಂದ ಮಹಿಳೆಯರು, ಅಲೆಮಾರಿಗಳು, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಸೇರಿ ಎಲ್ಲ ಜಾತಿಯ ಬಡವರು ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ. ದಾಖಲೆಗಳ ಕಾರಣ ನೀಡಿ ಅರ್ಹ ಪ್ರಜೆಗಳ ಮತದಾನದ ಹಕ್ಕು ಜೀವಂತ ಕಾಲದಲ್ಲಿಯೇ ನಿರಾಕರಿಸುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಯ ದುರಂತ ಅಂತ್ಯವಾಗಲಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತ್‌ನಾಯಕ್ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಎಸ್‌ಐಆರ್ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಜಾರಿಗೊಳಿಸಲು ಷಡ್ಯಂತ್ರ ನಡೆಯುತ್ತಿದೆ. ಎಸ್‌ಐಆರ್ ನಡೆದ ರಾಜ್ಯಗಳಲ್ಲಿ 30 ಲಕ್ಷದಿಂದ 3 ಕೋಟಿ ಮತದಾರರನ್ನು ತೆಗೆದುಹಾಕಲಾಗಿದೆ. ಕರ್ನಾಟಕ ಅತ್ಯಂತ ಸೂಕ್ಷ್ಮ ರಾಜ್ಯವಾಗಿದ್ದು, ಶೇ.2 ಮತಗಳು ಏರುಪೇರುವಾದರೆ ಆ ರಾಜ್ಯದ ರಾಜಕೀಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರ ಎನ್. ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕದ ಮತದಾರರ ಹಕ್ಕುನ್ನು ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರದ ರಕ್ಷಿಸಬೇಕು. ಎಸ್‌ಐಆರ್ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ, ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಬೇಕಾಬಿಟ್ಟಿ ಮಾಡಬಾರದು ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್ ಹೇಳುತ್ತಾರೆ.
ಪ್ರಗತಿಪರ ಸಂಘಟನೆಗಳು, ಜಾತ್ಯತೀತ ಪಕ್ಷಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.